Home ಟಾಪ್ ಸುದ್ದಿಗಳು ಶಾಸಕರ ಖರೀದಿ ಪ್ರಕರಣ: SIT ಎದುರು ಹಾಜರಾಗುವಂತೆ ಬಿ.ಎಲ್.ಸಂತೋಷ್’ಗೆ ಹೈಕೋರ್ಟ್ ನಿರ್ದೇಶನ

ಶಾಸಕರ ಖರೀದಿ ಪ್ರಕರಣ: SIT ಎದುರು ಹಾಜರಾಗುವಂತೆ ಬಿ.ಎಲ್.ಸಂತೋಷ್’ಗೆ ಹೈಕೋರ್ಟ್ ನಿರ್ದೇಶನ

ಹೈದರಾಬಾದ್: ಟಿಆರ್’ಎಸ್ ಶಾಸಕರ ಖರೀದಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್’ಐಟಿ ಎದುರು ಹಾಜರಾಗುವಂತೆ ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ. ಎಲ್ ಸಂತೋಷ್ ಅವರಿಗೆ ತೆಲಂಗಾಣ ಹೈಕೋರ್ಟ್ ನಿರ್ದೇಶನ ನೀಡಿದೆ.


ಆದರೆ ಮುಂದಿನ ಆದೇಶದವರೆಗೆ ಅವರನ್ನು ಬಂಧಿಸದಂತೆ ಸೂಚನೆ ನೀಡಿದೆ.

ಟಿಆರ್’ಎಸ್ ಶಾಸಕರ ಖರೀದಿ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್ಐಟಿ) ನೋಟಿಸ್ ನೀಡಿದ ನಾಲ್ವರಲ್ಲಿ ಒಬ್ಬರು ಮಾತ್ರ ಸೋಮವಾರ ತನಿಖಾಧಿಕಾರಿ (ಐಒ) ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಸಂತೋಷ್ ವಿಚಾರಣೆಗೆ ಹಾಜರಾಗಿರಲಿಲ್ಲ.

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌’ಪಿಸಿ) ಸೆಕ್ಷನ್ 41 ಎ (ಪೊಲೀಸ್ ಅಧಿಕಾರಿಯ ಮುಂದೆ ಹಾಜರಾಗುವ ಸೂಚನೆ) ಅಡಿ  ಎಸ್‌’ಐಟಿ ನವೆಂಬರ್ 16ರಂದು ನೀಡಿದ ನೋಟಿಸ್‌’ಗೆ ತಡೆ ಕೋರಿ ಬಿಜೆಪಿ ರಾಜ್ಯ ಘಟಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.

ತೆಲಂಗಾಣ ಪೊಲೀಸ್ ಎಸ್‌ಐಟಿ ಎದುರು ಹಾಜರಾಗಿ ಷರತ್ತುಗಳನ್ನು ಪಾಲಿಸುವಂತೆ ನ್ಯಾ. ಬಿ ವಿಜಯಸೇನ್ ರೆಡ್ಡಿ ಅವರಿದ್ದ ಏಕಸದಸ್ಯ ಪೀಠ ನಿರ್ದೇಶಿಸಿತು. ಆದರೆ ಮುಂದಿನ ಆದೇಶದವರೆಗೆ ಅವರನ್ನು ಬಂಧಿಸುವಂತಿಲ್ಲ ಎಂದು ಅದು ಸ್ಪಷ್ಟಪಡಿಸಿತು.

” ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ಎಸ್‌’ಐಟಿಯು ನೋಟಿಸ್ ನೀಡಿರುವುದರಿಂದ, ಮುಂದಿನ ಆದೇಶದವರೆಗೆ (ಸಂತೋಷ್) ಅವರನ್ನು ಬಂಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ದಿನಾಂಕ 16.11 ರಂದು ಸೆಕ್ಷನ್ 41 ಎ ಅಡಿ ನೀಡಲಾದ ನೋಟೀಸ್‌’ನಲ್ಲಿ ಎಸ್‌’ಐಟಿ ವಿಧಿಸಿದ ಷರತ್ತುಗಳನ್ನು (ಸಂತೋಷ್‌ ಅವರು) ಪಾಲಿಸತಕ್ಕದ್ದು” ಎಂದು ನ್ಯಾಯಾಲಯ ಸೂಚಿಸಿದೆ.

ಸಿಆರ್‌’ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ನೀಡಿರುವುದರಿಂದ ಸಂತೋಷ್ ಅವರು ಬಂಧನದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಕೂಡ ನ್ಯಾಯಾಲಯ ಸ್ಪಷ್ಟಪಡಿಸಿದೆ.

“ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ನೀಡಿದ್ದಾಗ, ವ್ಯಕ್ತಿಯ ಬಂಧನ ಅಗತ್ಯವಿಲ್ಲ ಎನ್ನುವುದನ್ನು ನಾವು ಮತ್ತೆ ಉಲ್ಲೇಖಿಸಬೇಕಾಗಿಲ್ಲ. ಸಿಆರ್‌’ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದ್ದು ಆ ಮೂಲಕ ತಮ್ಮನ್ನು ಬಂಧಿಸಬಹುದು ಎಂಬ ಆತಂಕವನ್ನು ಅರ್ಜಿದಾರರು ವ್ಯಕ್ತಪಡಿಸಿರುವಂತೆ ತೋರುತ್ತದೆ ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಗತ್ಯವಿದ್ದಲ್ಲಿ ವಿಭಾಗೀಯ ಪೀಠದಿಂದ ಈ ಬಗ್ಗೆ ಸ್ಪಷ್ಟನೆ ಪಡೆಯಲು ಅರ್ಜಿದಾರರಿಗೆ ನ್ಯಾಯಾಲಯ ಸ್ವಾತಂತ್ರ್ಯ ನೀಡಿದೆ.

ಆಡಳಿತಾರೂಢ ಟಿಆರ್‌’ಎಸ್‌ ಪಕ್ಷದ ಶಾಸಕರನ್ನು ಖರೀದಿ ಮಾಡುವಲ್ಲಿ ಬಿಜೆಪಿ ನಾಯಕರ ಪಾತ್ರದ ಬಗ್ಗೆ ಎಸ್‌’ಐಟಿ ತನಿಖೆ ನಡೆಸುತ್ತಿದೆ.  ಪ್ರಕರಣದ ತನಿಖೆ ನಡೆಸುತ್ತಿರುವ ಏಳು ಸದಸ್ಯರ ಎಸ್‌ಐಟಿ ಯಾವುದೇ ರಾಜಕೀಯ ಅಥವಾ ಕಾರ್ಯಾಂಗದ ಅಧಿಕಾರಸ್ಥರ ಎದುರು ವರದಿ ಮಾಡಬಾರದು ಬದಲಿಗೆ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಏಕಸದಸ್ಯ ಪೀಠಕ್ಕೆ ವರದಿ ಸಲ್ಲಿಸಬೇಕು ಎಂದು ನವೆಂಬರ್ 15 ರಂದು ಹೈಕೋರ್ಟ್ ನಿರ್ದೇಶಿಸಿತ್ತು.

(ಕೃಪೆ: ಬಾರ್&ಬೆಂಚ್)

Join Whatsapp
Exit mobile version