ಸುಳ್ಯ ಎನ್.ಎಂ.ಸಿ ಪದವಿ ಕಾಲೇಜಿನ ವಿರುದ್ಧ ಕ್ರಮಕ್ಕೆ ಎಸ್ ಡಿಪಿಐ ಆಗ್ರಹ
ಸುಳ್ಯ: ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟ್ ಮಧ್ಯಂತರ ಆದೇಶವನ್ನು ದುರ್ಬಳಕೆ ಮಾಡಿ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ನಿರಾಕರಿಸಿರುವ ಘಟನೆ ಅಮಾನವೀಯವಾಗಿದ್ದು ಸಂಬಂಧಪಟ್ಟ ಇಲಾಖೆ ಕಾಲೇಜು ಆಡಳಿತ ಸಮಿತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಎಸ್ಡಿಪಿಐ ಸುಳ್ಯ ನಗರ ಸಮಿತಿ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಎಸ್ ಡಿಪಿಐ ಸುಳ್ಯ ನಗರಾಧ್ಯಕ್ಷ ಮಿರಾಜ್ ಸುಳ್ಯ, ಹಿಜಾಬ್ ವಿಚಾರ ಈಗ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ ಈ ಮಧ್ಯೆ ಮಧ್ಯಂತರ ಆದೇಶ ನೀಡಿರುವ ಮಾನ್ಯ ಹೈಕೋರ್ಟ್, ಕಾಲೇಜು ಅಭಿವೃದ್ಧಿ ಸಮಿತಿ ಅಸ್ತಿತ್ವದಲ್ಲಿರುವ ಸಮವಸ್ತ್ರ ಕಡ್ಡಾಯಗೊಳಿಸಿದ ಕಾಲೇಜಿಗೆ ಮಾತ್ರ ಅನ್ವಯವಾಗುವಂತೆ ವಿಚಾರಣೆ ಮುಗಿಯುವವರೆಗೆ ಯಾವುದೇ ಧಾರ್ಮಿಕ ಸಂಕೇತಗಳನ್ನು ಧರಿಸಬಾರದೆಂದು ಆದೇಶ ನೀಡಿರುತ್ತದೆ.
ಇದನ್ನು ಉಲ್ಲಂಘಿಸಿ ರಾಜ್ಯದ ಕೆಲವು ಕಾಲೇಜುಗಳಲ್ಲಿ ಶಿರವಸ್ತ್ರ ಧರಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶಕ್ಕೆ ನಿರಾಕರಿಸಿದ್ದು, ಈ ಬಗ್ಗೆ ಮಾನ್ಯ ಹೈಕೋರ್ಟ್ ಆದೇಶದ ವಿರುದ್ಧವಾಗಿ ಬೇರೆ ಯಾವುದಾದರೂ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅನುಮತಿ ನಿರಾಕರಿಸಿದಲ್ಲಿ ಅಂತಹ ಸಂಸ್ಥೆ ಅಥವಾ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮಾನ್ಯ ಹೈಕೋರ್ಟ್ ಮೌಖಿಕ ಆದೇಶವನ್ನು ನೀಡಿರುತ್ತದೆ.
ಸುಳ್ಯ ನಗರದಲ್ಲಿರುವ NMC ಪದವಿ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಶಿರವಸ್ತ್ರ ಹಾಕಿ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ ಆದರೆ ಇದೀಗ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಹಾಕಲು ಅನುಮತಿ ನಿರಾಕರಿಸಿ ತರಗತಿಯಿಂದ ಹೊರ ಹಾಕಲಾಗಿದೆ ಇದು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ಆದುದರಿಂದ ಸಂಬಂಧಪಟ್ಟ ಇಲಾಖೆ ಕೂಡಲೇ ಕಾಲೇಜು ಆಡಳಿತ ಸಮಿತಿಯ ವಿರುದ್ಧ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶಕ್ಕೆ ಅನುವು ಮಾಡಿಕೊಡಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.