ಓಹಿಯೋ: ಅಮೆರಿಕದ ಓಹಿಯೋ ನಗರದಲ್ಲಿ ಭಾರತ ಮೂಲದ ವಿದ್ಯಾರ್ಥಿಯೊಬ್ಬರ ಶವ ಪತ್ತೆಯಾಗಿದೆ. ಕ್ಲೀವ್ ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿಗಾಗಿ 2023 ರಲ್ಲಿ ಯುಎಸ್ ಗೆ ತೆರಳಿದ್ದ ಹೈದರಾಬಾದ್ ನ 25 ವರ್ಷದ ವಿದ್ಯಾರ್ಥಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಮೊಹಮ್ಮದ್ ಅಬ್ದುಲ್ ಅರ್ಫಾತ್ ಸುಮಾರು ಮೂರು ವಾರಗಳಿಂದ ನಾಪತ್ತೆಯಾಗಿದ್ದರು ಮತ್ತು ದೂತಾವಾಸವು ಅಬ್ದುಲ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ಅವರನ್ನು ಪತ್ತೆಹಚ್ಚಲು ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಈ ಹಿಂದೆ ತಿಳಿಸಿತ್ತು.
ಇಂದು ಬೆಳಗ್ಗೆ ಅವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಮಾರ್ಚ್ 7 ರಂದು ಕುಟುಂಬದವರೊಂದಿಗೆ ಮಾತನಾಡಿದ್ದರು, ನಂತರ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಎಂದು ಅರ್ಫಾತ್ ತಂದೆ ತಿಳಿಸಿದ್ದಾರೆ. ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು ಬಳಿಕ ಮಗನನ್ನು ಅಪಹರಿಸಿದ್ದೇವೆ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದಾಗಿ ಹೇಳಿದ್ದಾರೆ. ಅಬ್ದುಲ್ ಈ ವರ್ಷ ಅಮೇರಿಕಾದಲ್ಲಿ ಸಾವನ್ನಪ್ಪಿದ ಹನ್ನೊಂದನೇ ಭಾರತೀಯ ಎಂದು ತಿಳಿದು ಬಂದಿದೆ.