ಬರ್ಮಿಂಗ್‌ಹ್ಯಾಮ್: 22ನೇ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮೊದಲ ಚಿನ್ನದ ಪದಕದ ಗೆಲುವಿನ ಸಂಭ್ರಮವನ್ನಾಚರಿಸಿದೆ. ವೇಟ್‌ಲಿಫ್ಟಿಂಗ್‌ನಲ್ಲಿ ಮಹಿಳೆಯರ 49 ಕೆ.ಜಿ ವಿಭಾಗದಲ್ಲಿ ಭಾರತದ ಹೆಮ್ಮೆಯ ಅಥ್ಲೀಟ್ ಮೀರಾಬಾಯಿ ಚಾನು, ಒಟ್ಟು 201 ಕೆ.ಜಿ ಭಾರ ಎತ್ತುವ ಮೂಲಕ ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ಶನಿವಾರ ಭಾರತಕ್ಕೆ ದೊರೆತ ಮೂರನೇ ಪದಕ ಇದಾಗಿದೆ. ಮೀರಾಬಾಯಿಗೂ ಮೊದಲು ಪುರುಷರ ವೇಟ್‌ಲಿಫ್ಟಿಂಗ್‌ನ 61 ಕೆಜಿ ವಿಭಾಗದಲ್ಲಿ ಕನ್ನಡಿಗ ಗುರುರಾಜ್ ಪೂಜಾರಿ ಕಂಚಿನ ಪದಕ ಮತ್ತು ಪುರುಷರ ವೇಟ್‌ಲಿಫ್ಟಿಂಗ್‌ನ 55 ಕೆಜಿ ವಿಭಾಗದಲ್ಲಿ ಭಾರತದ ಸಂಕೇತ್ ಮಹಾದೇವ್ ಸರ್ಗರ್ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದರು. 22ನೇ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಮೂರು ಪದಕಗಳು ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಲಭಿಸಿರುವುದು ವಿಶೇಷವಾಗಿದೆ.
ಮಹಿಳೆಯರ 49 ಕೆ.ಜಿ ವಿಭಾಗದಲ್ಲಿ ಮೀರಾಬಾಯಿ, ಸ್ನ್ಯಾಚ್‌ನಲ್ಲಿ 88 ಕೆ.ಜಿ, ಕ್ಲೀನ್ & ಜರ್ಕ್‌ನಲ್ಲಿ 113 ಕೆ.ಜಿ ಭಾರ ಎತ್ತುವ ಮೂಲಕ ಸ್ವರ್ಣ ನಗೆ ಬೀರಿದರು. ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಳೆದ ಕಾಮನ್‌ವೆಲ್ತ್ ಕೂಟದಲ್ಲೂ ಮೀರಬಾಯಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು. ಬರ್ಮಿಂಗ್‌ಹ್ಯಾಮ್‌ನಲ್ಲಿ ಒಟ್ಟು 201ಕೆ.ಜಿ ಭಾರ ಎತ್ತುವ ಮೂಲಕ ಕಾಮನ್‌ವೆಲ್ತ್ ಮತ್ತು ರಾಷ್ಟ್ರೀಯ ದಾಖಲೆಯನ್ನು ಮೀರಬಾಯಿ ತನ್ನದಾಗಿಸಿಕೊಂಡರು.