ಇಬ್ಬರು ಅಪ್ರಾಪ್ತ ಬಾಲಕರು ಕಾರಿನ ಬಾನೆಟ್ ಮೇಲೆ ಟ್ರಾಫಿಕ್ ಪೊಲೀಸರನ್ನು ಎಳೆದೊಯ್ದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇಬ್ಬರು ಪೊಲೀಸರು ಕಾರಿನ ಬಾನೆಟ್ ಮೇಲೆ ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇಷ್ಟಾದರೂ ಚಾಲಕ ಕಾರು ನಿಲ್ಲಿಸಿರಲಿಲ್ಲ. ದೆಹಲಿ ಪೊಲೀಸರ ಪ್ರಕಾರ, ಶನಿವಾರ ಸಂಜೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ.
ಸಂಚಾರ ಪೊಲೀಸ್ ಸಿಬ್ಬಂದಿ ಎಎಸ್ ಐ ಪ್ರಮೋದ್ ಮತ್ತು ಹೆಡ್ ಕಾನ್ಸ್ ಟೇಬಲ್ ಶೈಲೇಶ್ ಚೌಹಾಣ್ ಅವರು ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ಮೊಬೈಲ್ ಫೋನ್ ಗಳ ಮೂಲಕ ಚಲನ್ ಗಳನ್ನು ನೀಡುತ್ತಿದ್ದರು. ಆಗ ಕಾರೊಂದು ರೆಡ್ ಸಿಗ್ನಲ್ ಜಂಪ್ ಮಾಡಿ ಹೋಗಿತ್ತು.
ಆಗ ಪೊಲೀಸರು ಕಾರಿನ ಚಾಲಕನಿಗೆ ನಿಲ್ಲುವಂತೆ ಸೂಚಿಸಿದರು, ಆದರೂ ನಿಲ್ಲಲಿಲ್ಲ, ಆಗ ಪೊಲೀಸರು ಕಾರು ನಿಲ್ಲಿಸಲು ಯತ್ನಿಸಿದಾಗ ಬಾನೆಟ್ ಮೇಲೆ ಬಿದ್ದಿದ್ದಾರೆ. ಆದರೂ ಚಾಲಕ ಕಾರು ನಿಲ್ಲಿಸಿರಲಿಲ್ಲ. ಸುಮಾರು 20 ಮೀಟರ್ ವರೆಗೆ ಪೊಲೀಸ್ ಸಿಬ್ಬಂದಿಯನ್ನು ಎಳೆದೊಯ್ದಿದ್ದಾನೆ. ಈ ಘಟನೆಯ ನಂತರ ಆರೋಪಿ ಚಾಲಕ ಕಾರನ್ನು ಅತಿವೇಗದಲ್ಲಿ ಚಲಾಯಿಸಿ ಪರಾರಿಯಾಗಿದ್ದಾನೆ.