Home ಟಾಪ್ ಸುದ್ದಿಗಳು ಅಮರಾವತಿ ಬಂದ್ ವೇಳೆ ಮುಸ್ಲಿಮರ ಅಂಗಡಿಗಳ ಮೇಲೆ ದಾಳಿ: 60 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಅಮರಾವತಿ ಬಂದ್ ವೇಳೆ ಮುಸ್ಲಿಮರ ಅಂಗಡಿಗಳ ಮೇಲೆ ದಾಳಿ: 60 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಪುಣೆ: ಮಹಾರಾಷ್ಟ್ರದ ಅಮರಾವತಿಯಲ್ಲಿ ಮುಸ್ಲಿಮರ ಅಂಗಡಿಗಳನ್ನು ಗುರಿಯಾಗಿಸಿ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಕನಿಷ್ಠ 60 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಾಗ್ಪುರದಿಂದ 150 ಕಿ.ಮೀ ದೂರದಲ್ಲಿರುವ ಅಮರಾವತಿಯಲ್ಲಿ ಬಿಜೆಪಿ ಕರೆ ನೀಡಿದ ಬಂದ್ ನಲ್ಲಿ ಮುಸ್ಲಿಮ್ ಸಮುದಾಯದ ಅಂಗಡಿಗಳಿಗೆ ಬೆಂಕಿ ಹಚ್ಚಿ ನಾಶಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಹಿಂಸಾಚಾರ ನಡೆದ ಕೊತ್ವಾಲಿ ಎಂಬಲ್ಲಿ ಬಿಜೆಪಿ, ವಿ.ಎಚ್.ಪಿ, ಭಜರಂಗದಳ ಮತ್ತು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ದಾಂಧಲೆ ನಡೆಸಿ ದುಷ್ಕೃತ್ಯ ಮೆರೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಮೂರು ದ್ವಿಚಕ್ರ ವಾಹನ ಮತ್ತು ಎರಡು ಅಂಗಡಿಗಳು ಸುಟ್ಟು ಕರಕಲಾಗಿದ್ದು, ಒಂದು ಅಂಗಡಿ ಮತ್ತು ಎರಡು ದೇಗುಲಗಳಿಗೂ ಹಾನಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಶುಕ್ರವಾರ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ ತ್ರಿಪುರಾ ಮುಸ್ಲಿಮರ ಮೇಲಿನ ಹಿಂಸಾಚಾರವನ್ನು ಖಂಡಿಸಿ ಮುಸ್ಲಿಮ್ ಸಂಘಟನೆ ರಝಾ ಅಕಾಡೆಮಿ ವತಿಯಿಂದ ನಡೆದ ಪ್ರತಿಭಟನಾ ವೇಳೆಯಲ್ಲಿ ಘರ್ಷಣೆ ಉಂಟಾಗಿತ್ತು.

ಇದಕ್ಕೆ ಪ್ರತಿಯಾಗಿ ಬಿಜೆಪಿ ಶನಿವಾರದ ಬಂದ್ ಕರೆ ನೀಡಿದ್ದು, ಸುಮಾರು ಆರು ಸಾವಿರ ಸಂಘಪರಿವಾರದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಮುಸ್ಲಿಮರನ್ನು ಗುರಿಯಾಗಿಸಿ ವ್ಯಾಪಕ ಹಿಂಸಾಚಾರಕ್ಕಿಳಿದು ಬಿಗುವಿನ ವಾತಾವರಣ ನಿರ್ಮಿಸಿದ್ದರು.
ಈ ಸಂಬಂಧ 26 ಪ್ರಕರಣ ದಾಖಲಾಗಿದ್ದು, ಕನಿಷ್ಠ 60 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಅಮರಾವತಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಜೇಂದರ್ ಸಿಂಗ್ ತಿಳಿಸಿದ್ದಾರೆ.

Join Whatsapp
Exit mobile version