ಹಾಸನ: ನಗರದ ಬಿಎಂ ರಸ್ತೆಯ ಪಬ್‌ನಲ್ಲಿ ನಡೆದ ಜಗಳ ಹಿನ್ನೆಲೆಯಲ್ಲಿ ನಡೆದಿದ್ದ ಅಪ್ರಾಪ್ತ ವಿನಯ್ ಅಲಿಯಾಸ್ ವಿನಿ ಮರ್ಡರ್ ಪ್ರಕರಣದಲ್ಲಿ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾಜಿ ರೌಡಿಶೀಟರ್ ರಾಕಿ ಮತ್ತು ಈತನ ಸಹಚರರಾದ ರಕ್ಷಿತ್, ದಿನಿ, ಧನುಶ್, ನಾಗೇಶ್ ಮತ್ತು ಅಕ್ಷಯ್ ಬಂಧಿತ ಆರೋಪಿಗಳು.
ಜುಲೈ 9 ರ ರಾತ್ರಿ ಪಬ್‌ನಲ್ಲಿ ರಾಕಿ ಮತ್ತು ವಿನಯ್ ನಡುವೆ ಜಗಳ ನಡೆದಿತ್ತು. ಪತ್ನಿ ಎದುರೇ ವಿನಿ, ರಾಕಿಯನ್ನು ಅವಮಾನಿಸಿದ್ದ. ಅಲ್ಲದೆ ರಾಕಿ ಪತ್ನಿಯ ಮೈಮುಟ್ಟಿ ಅತಿರೇಕದ ವರ್ತನೆ ತೋರಿದ್ದ ಎನ್ನಲಾಗಿದೆ. ಇದರಿಂದ ಕುಪಿತರಾದ ರಾಕಿ ಅಂಡ್ ಗ್ಯಾಂಗ್ ಭಾನುವಾರ ವಿನಯ್‌ನನ್ನು ಕಾರಿನಲ್ಲಿ ಎಳೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ನಂತರ ಮೃತದೇಹವನ್ನು ಅದೇ ಕಾರಿನಲ್ಲಿ ಕೊಂಡೊಯ್ದು ಶಿರಾಡಿಘಾಟ್‌ನ ಫಾಲ್ಸ್ವೊಂದಕ್ಕೆ ಎಸೆದು ಬಂದಿದ್ದರು.
ಖಚಿತ ಮಾಹಿತಿ ಮೇರೆಗೆ ಇದಾದ ಬಳಿಕ ದಿಢೀರ್ ಕಾರ್ಯಾಚರಣೆ ನಡೆಸಿದ ಡಿವೈಎಸ್‌ಪಿ ಉದಯಭಾಸ್ಕರ್ ನೇತೃತ್ವದ ತಂಡ, ಒಟ್ಟು 8 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳ ಪಡಿಸಿತ್ತು. ಕೊಲೆಗಡುಕರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಡಿವೈಎಸ್ಪಿ ನೇತೃತ್ವದ ತಂಡ, ನುರಿತ ಈಜುಗಾರರ ನೆರವಿನೊಂದಿಗೆ ವಿನಯ್ ಮೃತದೇಹ ಪತ್ತೆ ಹಚ್ಚಿತ್ತು. ನಂತರ ಎಸ್ಪಿ ಹರಿರಾಂ ಶಂಕರ್ ಸಹ ನಿನ್ನೆ ಸಂಜೆ ಬಾಡಿ ಸಿಕ್ಕ ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಮೃತದೇಹವನ್ನು ಹಾಸನಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಿದ ವಾರಸುದಾರರಿಗೆ ಒಪ್ಪಿಸಲಾಯಿತು.
ವಿಚಾರಣೆ ವೇಳೆ, ಈ 6 ಮಂದಿ ತಾವೇ ಕೊಲೆ ಮಾಡಿದ್ದು ಎಂದು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ, ಬಂಧಿಸಲಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೊಲೆ ರಹಸ್ಯ ಬಯಲು ಮಾಡಿದ ಪೊಲೀಸರ ಕ್ರಮ ಜನಮೆಚ್ಚುಗೆಗೆ ಪಾತ್ರವಾಗಿದೆ.
ಇಂದು ನಗರಠಾಣೆ ಇನ್ಸ್ಪೆಕ್ಟರ್ ರೇವಣ್ಣ ಆರೋಪಿಗಳೊಂದಿಗೆ ವಿನಯ್ ಹತ್ಯೆ ನಡೆದ ಕೈಗಾರಿಕಾ ಪ್ರದೇಶದಲ್ಲಿ ಸ್ಥಳ ಮಹಜರ್ ನಡೆಸಿದರು. ಈ ವೇಳೆ ವಿನಯ್‌ನನ್ನು ಕೊಲೆ ಮಾಡಿದ್ದು ಹೇಗೆ ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಕೊಲೆಯಾದ ವಿನಿ ಜ್ಞಾನಧಾರೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಬೈಕ್ ವ್ಹೀಲಿಂಗ್ ಮೂಲಕ ಅನೇಕ ಸಂದರ್ಭದಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ವ್ಹೀಲಿಂಗ್ ವಿನಿ ಎಂದೇ ಕುಖ್ಯಾತಿ ಪಡೆದಿದ್ದ. ವಯಸ್ಸಿನ್ನು 18 ತುಂಬದೇ ಇದ್ದರೂ, ಹಲವು ದುಶ್ಚಟಗಳನ್ನು ಮೈಗೂಡಿಸಿಕೊಂಡಿದ್ದ ಈತ, ಕುಡಿದ ಮತ್ತಿನಲ್ಲಿ ಹಾಗೂ ಇತರೆ ಸಂದರ್ಭಗಳಲ್ಲಿ ಪುಂಡಾಟ ಪ್ರದರ್ಶನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈತನ ಉಪಟಳದಿಂದ ಅನೇಕರು ರೋಸಿಹೋಗಿದ್ದರು. ಜುಲೈ 9 ರ ರಾತ್ರಿ ಕೂಡ ಮದ್ಯದ ಅಮಲಿನಲ್ಲಿ ರಾಕಿ ಪತ್ನಿ ಎದುರು ಅತಿರೇಕದ ವರ್ತನೆ ತೋರಿದ್ದ ಎನ್ನಲಾಗಿದೆ. ಇದೇ ಆತನ ಜೀವನಕ್ಕೆ ಕುತ್ತು ತಂದಿತು ಎಂಬ ಮಾತುಗಳು ಕೇಳಿ ಬರುತ್ತಿವೆ. ಪಿಯುಸಿ ಓದುವ ಮಕ್ಕಳೇ ಹೀಗಾದರೆ ಹೇಗೆ ಎಂಬುದು ಅನೇಕರ ಪ್ರಶ್ನೆಯಾಗಿದೆ.