ಲಕ್ನೋ: ಉತ್ತರ ಪ್ರದೇಶದ ಮೊರಾದಾಬಾದ್ ನ ಹಳ್ಳಿವೊಂದರಲ್ಲಿ ಏಳು ವರ್ಷದ ಮುಸ್ಲಿಮ್ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಬಾಲಕಿ ಕಾಣೆಯಾಗಿರುವ ಕುರಿತು ಕುಟುಂಬ ದೂರು ನೀಡಿದ ಬಳಿಕ ಆಕೆಯ ಮೃತದೇಹ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿತ್ತು.
ಶುಕ್ರವಾರ ಜಮೀನಿನ ತೆರಳಿದ್ದ ವೇಳೆ ರೈತನೊಬ್ಬನಿಗೆ ಆ ಪ್ರದೇಶದಲ್ಲಿ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಹುಡುಕಾಡಿದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯ ಮೃತದೇಹ ಕಾಣಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಡಿಸೆಂಬರ್ 22 ರಂದು ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಬಾಲಕಿ ನಾಪತ್ತೆಯಾಗಿದ್ದಳು ಎಂದು ಹೇಳಲಾಗಿದೆ. ಈ ಬಗ್ಗೆ ಆಕೆ ನಾಪತ್ತೆಯಾಗಿರುವ ಕುರಿತು ಕುಟುಂಬದ ಸದಸ್ಯರು ದೂರು ದಾಖಲಿಸಿದ್ದರು. ಬಾಲಕಿಯ ಪತ್ತೆಗಾಗಿ ಎರಡು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಹುಡುಕಾಡಿದರೂ ಆಕೆ ಪತ್ತೆಯಾಗಿರಲಿಲ್ಲ. ಈ ಮಧ್ಯೆ ಆಕೆಯ ಶವ ಮನೆಯಿಂದ 2 ಕಿ.ಮೀ ದೂರದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ.
ಮೃತ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅತ್ಯಾಚಾರ ನಡೆಸಿ ಹತ್ಯೆಗೈದಿರುವುದು ದೃಢಪಟ್ಟಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿದ್ಯಾ ಸಾಗರ್ ಮಿಶ್ರಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ರಾಜಕಾರಣಿಗಳು ಸಂತಾಪ ಸೂಚಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮಾತ್ರವಲ್ಲ ಬಾಲಕಿಯ ಹೆತ್ತವರು ನೀಡಿದ ದೂರಿನನ್ವಯ ಐಪಿಸಿ ಮತ್ತು ಪೋಕ್ಸೋ ಕಾಯ್ದೆ ಅಡಿಯಲ್ಲಿ ಅತ್ಯಾಚಾರ, ಅಪಹರಣ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿ ಮಹೇಶ್ ಗೌತಮ್ ತಿಳಿಸಿದ್ದಾರೆ.