Home ಟಾಪ್ ಸುದ್ದಿಗಳು ಐಸ್ ಕ್ರೀಮ್ ಕೊಡಿಸುವ ಆಮಿಷ ತೋರಿಸಿ ಅಪ್ರಾಪ್ತ ಬಾಲಕಿಯರ ಅಪಹರಣ: ಓರ್ವಳ ಮೃತದೇಹ ಪತ್ತೆ, ಮತ್ತೊಬ್ಬಳು...

ಐಸ್ ಕ್ರೀಮ್ ಕೊಡಿಸುವ ಆಮಿಷ ತೋರಿಸಿ ಅಪ್ರಾಪ್ತ ಬಾಲಕಿಯರ ಅಪಹರಣ: ಓರ್ವಳ ಮೃತದೇಹ ಪತ್ತೆ, ಮತ್ತೊಬ್ಬಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್  ನಲ್ಲಿ ಮನೆಯ ಎದುರು ಆಟವಾಡುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಐಸ್ ಕ್ರೀಸ್ ಕೊಡಿಸುವ ಆಮಿಷ ತೋರಿಸಿದ ಅದೇ ಗ್ರಾಮದ ವ್ಯಕ್ತಿಯೋರ್ವ ಇಬ್ಬರನ್ನೂ ಅಪಹರಿಸಿದ ಘಟನೆ ನಡೆದಿದ್ದು, ಪೊಲೀಸರು ಹುಡುಕಾಡಿದಾಗ ಓರ್ವಳ ಮೃತದೇಹ ಹೊಲದಲ್ಲಿ ಪತ್ತೆಯಾದರೆ ಮತ್ತೋರ್ವಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

 ಅಪಹರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆಯಲ್ಲಿ ಒಬ್ಬಳು ಗುರುವಾರ ತಡರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಮತ್ತೊಬ್ಬಳ ಮೃತದೇಹ ಶುಕ್ರವಾರ ಬೆಳಿಗ್ಗೆ ಹೊಲದಲ್ಲಿ ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತ ಬಾಲಕಿಯರನ್ನು ಸಾನಿಯಾ (8) ಮತ್ತು ಶಿಫಾ (5) ಹಾಗೂ ಆರೋಪಿಯನ್ನು 25 ವರ್ಷದ ಕಪಿಲ್ ಕಶ್ಯಪ್ ಎಂದು ಗುರುತಿಸಲಾಗಿದೆ.

ಆಗಸ್ಟ್ 18 ರ ಸಂಜೆ ಸಾನಿಯಾ (8) ಮತ್ತು ಶಿಫಾ (5) ಮನೆಯ ಹೊರಗೆ ಆಟವಾಡುತ್ತಿದ್ದ ಸಮಯದಲ್ಲಿ ಆರೋಪಿ ಕಪಿಲ್ ಕಶ್ಯಪ್, ಐಸ್ ಕ್ರೀಮ್ ಕೊಡುವ ನೆಪದಲ್ಲಿ ಬೈಸಿಕಲ್ ನಲ್ಲಿ ಇಬ್ಬರನ್ನೂ ಹೊಲಕ್ಕೆ ಕರೆದೊಯ್ದಿದ್ದನು ಎನ್ನಲಾಗಿದೆ.

ಅಪಹರಣ ಪ್ರಕರಣ ಬೆಳಕಿಗೆ ಬಂದ ನಂತರ, ಪೊಲೀಸರ ಶೋಧ ಕಾರ್ಯಾಚರಣೆ ನಡೆಸಿದಾಗ ಗುರುವಾರ ತಡರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶಿಫಾಳನ್ನು ಪತ್ತೆ ಹಚ್ಚಿದ್ದರು. ಆದರೆ ಸಾನಿಯಾ ತಡರಾತ್ರಿಯವರೆಗೂ ಪತ್ತೆಯಾಗಿರಲಿಲ್ಲ. ಶುಕ್ರವಾರ ಬೆಳಿಗ್ಗೆ ಸಾನಿಯಾಳ ಮೃತದೇಹ ಹೊಲದಲ್ಲಿ ಪತ್ತೆಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ ಆರೋಪಿಯು ಅದೇ ಊರಿನವನಾಗಿದ್ದು, ಮಾದಕ ವ್ಯಸನಿಯಾಗಿದ್ದ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

Join Whatsapp
Exit mobile version