Home ಟಾಪ್ ಸುದ್ದಿಗಳು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಅಪ್ರಾಪ್ತ ಬಾಲಕ ಆತ್ಮಹತ್ಯೆ

ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಅಪ್ರಾಪ್ತ ಬಾಲಕ ಆತ್ಮಹತ್ಯೆ

ಕೂಡ್ಲಿಗಿ: ಮನೆಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಮೊಬೈಲ್ ನಲ್ಲಿ ಗೇಮ್ ಆಡುತ್ತೀಯ ಎಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ 17 ವರ್ಷದ ಬಾಲಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಾಲಸಾಗರ ಗ್ರಾಮದಲ್ಲಿ ಜರುಗಿದೆ.

ಉಮೇಶ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಈತ ಬಳ್ಳಾರಿಯ ಕಾಲೇಜ್ ವೊಂದರ ವಿದ್ಯಾರ್ಥಿಯಾಗಿದ್ದು ಜುಲೈ 4ರಂದು ಕಾಲೇಜಿನಿಂದ ಮನೆಗೆ ಬಂದವನೇ ಮೊಬೈಲ್ ಹಿಡಿದು ಗೇಮ್ ಆಡುತ್ತಿದ್ದ, ತಂದೆ ಮನೆಯಲ್ಲಿ ಕೆಲಸ ಬಿಟ್ಟು ಗೇಮ್ ಆಡುವುದು ಸರಿಯಲ್ಲ ಎಂದು ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದ ಮಗ ಅದೇ ದಿನ ಸಂಜೆ ಮನೆಯಿಂದ ಹೊರಹೋಗಿದ್ದಾನೆ.

ನಂತರ ಮನೆಗೆ ಬಾರದೆ ಇದ್ದುದಕ್ಕೆ ಎಲ್ಲಾ ಕಡೆ ಹುಡುಕಾಡಿದರೂ ಮಗ ಸಿಗದೇ ಇದ್ದದ್ದರಿಂದ, ಮಗ ಕಾಣೆಯಾದ ಬಗ್ಗೆ ಪೋಷಕರು ಗುಡೇಕೋಟೆ ಪೊಲೀಸ್ ಠಾಣೆಗೆ ದೂರುಕೊಡಲು ಹೋದಾಗ ಅಷ್ಟರಲ್ಲೇ ಅದೇ ಗ್ರಾಮದ ಬಾವಿಯಲ್ಲಿ ಯುವಕನ ಶವ ಸಿಕ್ಕಿರುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣ ಅಲ್ಲಿಗೆ ಹೋಗಿ ನೋಡಿದಾಗ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ.

Join Whatsapp
Exit mobile version