ಪ್ರವಾಹ ಪೀಡಿತ ಪ್ರದೇಶಕ್ಕೆ ಮಂತ್ರಿಗಳಿಂದ ನೆಪ ಮಾತ್ರದ ಭೇಟಿ: ಡಿ.ಕೆ. ಶಿವಕುಮಾರ್

Prasthutha|

ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಿಗೆ ಸರ್ಕಾರದ ಮಂತ್ರಿಗಳು, ಶಾಸಕರು ಹಾಗೂ ನಾಯಕರು ನೆಪ ಮಾತ್ರಕ್ಕೆ ಭೇಟಿ ನೀಡುತ್ತಿದ್ದಾರೆಯೇ ಹೊರತು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಉದ್ದೇಶದಿಂದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಸದಾಶಿವನಗರ ನಿವಾಸದ ಬಳಿ ಮಂಗಳವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗುವಂತೆ ಮಪಖ್ಯಮಂತ್ರಿಗಳು ಮಂತ್ರಿಗಳ ಬಳಿ ಮನವಿ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಮಂತ್ರಿಗಳು ತಮ್ಮ ಜವಾಬ್ದಾರಿಗೆ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ. ಕೊಡಗಿನ ಪರಿಸ್ಥಿತಿ ಶೋಚನೀಯವಾಗಿದೆ. ಯಾರೊಬ್ಬರಿಗೂ ಈ ಸರ್ಕಾರ ನೆರವು ನೀಡಿಲ್ಲ. ಅಧಿಕಾರಿಗಳು ಕೂಡ ಯಾವುದೇ ಕೆಲಸ ಮಾಡಿಲ್ಲ. ನೆಪ ಮಾತ್ರಕ್ಕೆ ಬೆರಳೆಣಿಕೆ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಜನರಿಗೆ ಸಹಾಯ ಮಾಡುವ ಯಾವುದೇ ಉದ್ದೇಶದಿಂದ ಈ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಟೀಕಿಸಿದರು.

ಇನ್ನು ಚಾಮರಾಜಪೇಟೆಯ ಈದ್ಗಾ ಮೈದಾನ ಕುರಿತ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹಿಂದಿನಿಂದ ಚಾಮರಾಜಪೇಟೆ ಮೈದಾನವನ್ನು ಯಾವ ರೀತಿ ಇತಿಹಾಸವಿದೆಯೋ ಅದೇ ರೀತಿ ಮುಂದುವರಿಸಬೇಕು. ಹೊಸದಾಗಿ ಬದಲಾವಣೆ ಮಾಡಿ ಜನರಲ್ಲಿ ಅನಗತ್ಯ ಗೊಂದಲ ಮೂಡಿಸುವ ಕೆಲಸ ಮಾಡಬಾರದು. ಈ ಮೈದಾನದ ದಾಖಲೆಗಳಲ್ಲಿ ಏನಿದೆ, ಸಾರ್ವಜನಿಕ ಗಮನದಲ್ಲಿ ಏನಿದೆ ಎಂದು ಎಲ್ಲರಿಗೂ ತಿಳಿದಿದೆ. ಬಿಜೆಪಿ ಹಾಗೂ ಇತರೆ ಸಂಘಟನೆಗಳು ಅಶಾಂತಿ ಮೂಡಿಸುವ ಕೆಲಸ ಮಾಡಬಾರದು’ ಎಂದರು.

Join Whatsapp
Exit mobile version