ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆ: ಸಚಿವ ಸುರೇಶ್ ಕುಮಾರ್

Prasthutha: July 6, 2021

ಬೆಂಗಳೂರು: ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಲಸಿಕೆ ಪಡೆಯುವುದರೊಂದಿಗೆ ಪರೀಕ್ಷೆ ಸುರಕ್ಷಿತ ವಾತಾವರಣದಲ್ಲಿ ಅಚ್ಚುಕಟ್ಟಾಗಿ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ಕುರಿತಂತೆ ಮಕ್ಕಳು ಮತ್ತು ಪೋಷಕರಲ್ಲಿ ಆತ್ಮ ವಿಶ್ವಾಸ ಮೂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಜಿಲ್ಲಾ ಶೈಕ್ಷಣಿಕ ಉಪನಿರ್ದೇಶಕರು ಮತ್ತು ಬಿಇಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಕುರಿತು ಪರಿಶೀಲನೆ ನಡೆಸಿ ಮಾರ್ಗದರ್ಶನ ನೀಡಿದ ನಂತರ ಮಾತನಾಡಿದ ಅವರು, ಹೊಸ ರೀತಿಯಲ್ಲಿ ನಡೆಯುತ್ತಿರುವ ಪರೀಕ್ಷೆಗಳನ್ನು ಬರೆಯುವ ಕುರಿತು ಮಕ್ಕಳ ಮನಃಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡು, ಕಳೆದ ಬಾರಿಯಂತೆ ಎಲ್ಲ ಅಧಿಕಾರಿಗಳು ಮತ್ತು ಶಿಕ್ಷಕರು ಈ ಬಾರಿಯೂ ಪರೀಕ್ಷೆಯ ಯಶಸ್ಸಿಗೆ ಸಹಕರಿಸಿ ಮಕ್ಕಳ ಹಿತಕ್ಕಾಗಿ ಶ್ರಮಿಸಬೇಕೆಂದು ಸೂಚನೆ ನೀಡಿದರು.

ರಾಜ್ಯದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ತೀವ್ರವಾಗಿ ಇಳಿಮುಖ ಕಾಣುತ್ತಿರುವುದು ಪೋಷಕರು ಮತ್ತು ಮಕ್ಕಳಲ್ಲಿ ಸಂತಸದ ಭಾವನೆ ಮೂಡಿಸಿದ್ದು ಪರೀಕ್ಷೆಗೆ ಮಕ್ಕಳನ್ನು ಧೈರ್ಯವಾಗಿ ಕಳಿಸಲು ಪೋಷಕರು ಉತ್ಸುಕವಾಗಿರುವುದು ಕಂಡು ಬಂದಿದೆ ಎಂದು ಸಚಿವರು ಹೇಳಿದರು.

ಶೇಕಡಾ 95 ಕ್ಕಿಂತ ಹೆಚ್ಚು ಸಂಖ್ಯೆಯ ಪರೀಕ್ಷಾ ಸಿಬ್ಬಂದಿ ಲಸಿಕೆಯನ್ನು ಈಗಾಗಲೇ ಪಡೆದುಕೊಂಡಿರುವುದು ಅತ್ಯಂತ ಭರವಸೆ ತಂದಿರುವ ಸಂಗತಿ. ಇನ್ನುಳಿದವರು ಇನ್ನೆರಡು ದಿನಗಳಲ್ಲಿ ಲಸಿಕೆ ಪಡೆಯಲಿದ್ದಾರೆ ಎಂದು ಡಿಡಿಪಿಐ ಗಳು ಅಂಕಿ – ಅಂಶ ಗಳ ಮೂಲಕ ತಿಳಿಸಿದ್ದಾರೆ. ಪರೀಕ್ಷೆಗಳ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಆಯಾ ಹಂತದಲ್ಲಿ ಕೈಗೊಂಡ ಉಪಕ್ರಮಗಳನ್ನು ಆಲಿಸಿದ ಸಚಿವರು ಉತ್ತಮ ಕ್ರಮಗಳನ್ನು ಇತರೆ ಜಿಲ್ಲೆಗಳವರು ವಿನಿಮಯ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದರು. ಪರೀಕ್ಷೆ ಕುರಿತಂತೆ ಮಕ್ಕಳನ್ನು ನೇರವಾಗಿ ತಲುಪಿ ಆ ಕುರಿತು ಮಾರ್ಗದರ್ಶನ ನೀಡಲು ಮುಂದಾಗಬೇಕು. ಮಕ್ಕಳನ್ನು ಆಯಾ ಗ್ರಾಮಪಂಚಾಯ್ತಿ ಮಟ್ಟದ ಗ್ರಂಥಾಲಯಗಳಿಗೆ ಕರೆಸಿಕೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಲು ಕ್ರಮ ವಹಿಸಬೇಕು. ಇದನ್ನು ಆಯಾ ಬಿಇಒಗಳು ಬಿಆರ್‍ಸಿ/ ಸಿಆರ್‍ಸಿ ಮತ್ತು ಮುಖ್ಯ ಶಿಕ್ಷಕರ ಮೂಲಕ ಈ ಕ್ರಮಕ್ಕೆ ಮುಂದಾಗಬೇಕೆಂದು ಸುರೇಶ್ ಕುಮಾರ್ ಸಲಹೆ ನೀಡಿದರು.

ಯಾವುದೇ ಕಾರಣದಿಂದಲೂ ಯಾವುದೇ ಒಂದು ಮಗುವೂ ಸಹ ಪರೀಕ್ಷೆಯಿಂದ ವಂಚಿತವಾಗದಂತೆ ಕ್ರಮ ವಹಿಸುವುದೂ ಸೇರಿದಂತೆ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರೂಪಿಸಿದ ಎಸ್‍ಒಪಿ ಅನುಷ್ಠಾನ ಕುರಿತು ಚರ್ಚಿಸಿ, ಅಗತ್ಯವಿರುವ ಮಕ್ಕಳಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ವಾಹನ ವ್ಯವಸ್ಥೆ ಮಾಡಲು ಸಚಿವರು ಸೂಚನೆ ನೀಡಿದರು. ಕಳೆದ ವರ್ಷ ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತವಾಗದೇ ಇರುವುದು ಮತ್ತು ಒಬ್ಬನೇ ಒಬ್ಬ ಕೊನೆಯ ಕುಗ್ರಾಮದ ವಿದ್ಯಾಥಿ೵ಯೊಬ್ಬನಿಗಾಗಿ ಒಂದು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿದ್ದನ್ನು ಅವರು ಸ್ಮರಿಸಿದರು.

ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ನೀಡಿದ ಪ್ರಶ್ನೆ ಪತ್ರಿಕೆಗಳ ಒಎಂಆರ್ ಶೀಟ್ ಸೇರಿದಂತೆ ಆಯಾ ಜಿಲ್ಲೆಗಳಲ್ಲಿ ರೂಪಿಸಲಾದ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಮಕ್ಕಳು ಉತ್ತರಿಸಿ ಪರೀಕ್ಷಾ ಪದ್ಧತಿ ಕುರಿತು ಆತ್ಮವಿಶ್ವಾಸ ಮೂಡಿಸಿಕೊಂಡಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಆಯಾ ಶಾಲೆಗಳಲ್ಲಿ ಪರೀಕ್ಷೆ ನಡೆಸಿ ಮಾರ್ಗದರ್ಶನ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಮಕ್ಕಳ ಮನೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಿ ಅವುಗಳನ್ನು ಪಡೆದುಕೊಂಡು ಮಾರ್ಗದರ್ಶನ ನೀಡಲಾಗಿದೆ. ವೆಬಿನಾರ್, ವಾಟ್ಸಪ್‍ಗಳ ಮೂಲಕ ಹಾಗೆಯೇ ಕೆಲವೆಡೆಗಳಲ್ಲಿ ಮಕ್ಕಳ ಪೋಷಕರ ಉಪಸ್ಥಿತಿಯಲ್ಲಿ ಪ್ರಶ್ನೆ ಪತ್ರಿಕೆ ಉತ್ತರಿಸಲು ಮಕ್ಕಳಿಗೆ ತಿಳಿಹೇಳಲಾಗಿದ್ದು, ಪರೀಕ್ಷೆ ಕುರಿತು ಮಕ್ಕಳು ಮತ್ತು ಪೋಷಕರಲ್ಲಿ ವಿಶ್ವಾಸ ಮೂಡುವಂತಹ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದೂ ಸಚಿವರು ವಿವರಿಸಿದರು.

ಈಗಾಗಲೇ ಆಯಾ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ ಪರೀಕ್ಷೆ ಸಿದ್ಧತೆ ಕುರಿತು ಚರ್ಚಿಸಿ ವಿವಿಧ ಇಲಾಖೆ ಅಧಿಕಾರಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಕುರಿತು ಸೂಚನೆ ನೀಡಿದ್ದಾರೆ. ಗ್ರಾಮ ಪಂಚಾಯತಿ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳು ಪರೀಕ್ಷಾ ಕೇಂದ್ರದ ಸ್ಯಾನಿಟೈಸೇಷನ್ ಮಾಡುವ ಕುರಿತು ಸೂಚನೆಗಳನ್ನು ನೀಡಿದ್ದಾರೆ. ಸಾರಿಗೆ ವ್ಯವಸ್ಥೆಯ ಕೊರತೆಯಿರುವ ಮಕ್ಕಳನ್ನು ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಪರೀಕ್ಷೆಗೆ ಬಹಳ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಬರುತ್ತಿರುವುದರಿಂದ ಮಕ್ಕಳು ಕೇಂದ್ರದಿಂದ ಹೊರಡುವಾಗ ಅವರಿಗೆ ಲಘು ಉಪಹಾರದ ವ್ಯವಸ್ಥೆಯನ್ನೂ ಕೆಲ ಜಿಲ್ಲೆಗಳಲ್ಲಿ ಮಾಡಲಾಗಿದೆ. ಅದೇ ರೀತಿ ಉಳಿದ ಜಿಲ್ಲೆಗಳಲ್ಲಿ ಲಘು ಉಪಹಾರ, ಬಿಸ್ಕತ್ ಇಲ್ಲವೇ ನೀರಿನ ವ್ಯವಸ್ಥೆ ಹಾಗೆಯೇ ಮಾಸ್ಕ್, ಸ್ಯಾನಿಟೈಸರ್ ಒದಗಿಸಲು ಯಾವುದೇ ಸಂಘಸಂಸ್ಥೆಗಳು ಮುಂದೆಬಂದರೆ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಚಿವರು ಸಲಹೆ ನೀಡಿದದರು. ಕೆಲ ಜಿಲ್ಲೆಗಳಲ್ಲಿ ಶಾಸಕರು, ಸಂಘ ಸಂಸ್ಥೆಗಳು ಉದಾರವಾಗಿ ಇಂತಹ ಕೊಡುಗೆಗಳಿಗೆ ಮುಂದೆ ಬಂದಿದ್ದು ಅವುಗಳನ್ನು ಪಡೆದುಕೊಳ್ಳಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು ಎಂದು ಸಚಿವರು ತಿಳಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ