ಬಿ ವೈ ವಿಜಯೇಂದ್ರ ಹೆಸರಲ್ಲಿ ವಂಚನೆ | ಸಚಿವ ಶ್ರೀ ರಾಮುಲು ಆಪ್ತ ಸಹಾಯಕನ ಬಂಧನ

Prasthutha|

ಬಿ ವೈ ವಿಜಯೇಂದ್ರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಶ್ರೀ ರಾಮುಲು

- Advertisement -

ಬೆಂಗಳೂರು : ಸಚಿವರು, ಸಿಎಂ ಪುತ್ರ ಬಿ ವೈ ವಿಜಯೇಂದ್ರ ಹೆಸರು ಹೇಳಿಕೊಂಡು ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ಪಿ ಎ ರಾಜು ಬಂಧನವಾಗಿದೆ.

ಸಚಿವ ಶ್ರೀರಾಮುಲು ಅವರ ಪಿಎ ರಾಜು ವಿರುದ್ಧ ಬಹುಕೋಟಿ ರೂಪಾಯಿ ವಂಚನೆ ಎಸಗಿರುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಸಿಸಿಬಿಗೆ ದೂರು ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಸಾಕ್ಷಿಗಳನ್ನು ಕಲೆ ಹಾಕಿ ಸಿಸಿಬಿ ಪೊಲೀಸರು ನಿನ್ನೆ ರಾಜಣ್ಣ ಅವರನ್ನು ಬಂಧಿಸಿದ್ದಾರೆ.

- Advertisement -

ಸಿಟಿ ಸೈಬರ್ ಕ್ರೈಂ ಪೊಲೀಸ್ ಇಲಾಖೆಯಲ್ಲಿ ಬಿ ವೈ ವಿಜಯೇಂದ್ರ ಅವರು ವಂಚನೆ ದೂರನ್ನು ರಾಜಣ್ಣ ವಿರುದ್ಧ ದಾಖಲಿಸಿದ್ದರು. ಜನರಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ, ಅಲ್ಲದೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂದು ದೂರು ನೀಡಿದ್ದರು. ಅವರು ಕೊಟ್ಟ ದೂರಿನ ಆಧಾರದ ಮೇಲೆ ಪೊಲೀಸರು ರಾಜಣ್ಣ ಮತ್ತು ಇತರ ಕೆಲವು ಮಂದಿ ವಿರುದ್ಧ ವಂಚನೆ ಹಾಗೂ ಐಟಿ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದಾರೆ.

ನಿನ್ನೆ ಸಾಯಂಕಾಲ ಬಿ ಶ್ರೀರಾಮುಲು ಅವರ ನಿವಾಸದಲ್ಲಿಯೇ ರಾಜಣ್ಣ ಬಂಧನವಾಗಿದೆ. ಕೆಲಸ ಕೊಡಿಸುವ ಆಮಿಷ ಮತ್ತು ಇತರ ಕೆಲಸ ಮಾಡಿಸಿಕೊಡುವುದಾಗಿ ನಂಬಿಸಿ ರಾಜಣ್ಣ ಹಲವರನ್ನು ನಂಬಿಸಿ ಮೋಸ ಮಾಡಿದ್ದಲ್ಲದೆ ಹಣವನ್ನು ಪಡೆದುಕೊಂಡಿದ್ದರು, ಈ ಆಧಾರದ ಮೇಲೆ ಸಾಕ್ಷಿ ಕಲೆಹಾಕಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ ಸಚಿವರು ಯಾರೂ ಕೂಡ ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಳ್ಳಬಾರದು, ಅದು ಸರಿಯಲ್ಲ, ನನ್ನ ಬಳಿ ಕೆಲಸಕ್ಕಿದ್ದ ರಾಜಣ್ಣ ವಿರುದ್ಧ ಎಫ್ ಐಆರ್ ದಾಖಲಾಗಿದೆ, ತನಿಖೆ ಕೂಡ ನಡೆಯುತ್ತಿದೆ, ಹೀಗಾಗಿ ನಾನು ಹೆಚ್ಚಿಗೆ ಮಾತನಾಡಲು, ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದರು.

ರಾಜಣ್ಣ ನನಗೆ ಗೊತ್ತಿರುವ ಹುಡುಗ, ನನ್ನ ಬಳಿಯೇ ಕೆಲಸ ಮಾಡುತ್ತಿದ್ದ, ಹಾಗೆಂದು ಅಧಿಕೃತವಾಗಿ ನನ್ನ ಕಚೇರಿಯಲ್ಲಿ ಕೆಲಸಕ್ಕೆ ಇದ್ದವನಲ್ಲ, ನಿನ್ನೆ ಆತನನ್ನು ನನ್ನ ನಿವಾಸಕ್ಕೆ ಬಂದು ಪೊಲೀಸರು ಬಂಧಿಸುವವರೆಗೆ ನನಗೆ ಯಾವುದೇ ಮಾಹಿತಿಯಿರಲಿಲ್ಲ ಎಂದರು.

ನನಗೆ ಮೊದಲೇ ಮಾಹಿತಿ ಇದ್ದಿದ್ದರೆ ಈ ಬಗ್ಗೆ ವಿಜಯೇಂದ್ರ ಅವರಲ್ಲಿ ಮಾತನಾಡಿ ಸರಿಪಡಿಸುತ್ತಿದ್ದೆ, ರಾಜುನನ್ನು ಕರೆದು ಕೇಳುತ್ತಿದ್ದೆ, ನನಗೆ ಮೊದಲೇ ಮಾಹಿತಿ ನೀಡಬೇಕಾಗಿದ್ದು, ಬಂಧನ ಆಗುವವರೆಗೆ ನನಗೆ ಈ ಬಗ್ಗೆ ಒಂಚೂರು ಮಾಹಿತಿ ಇರಲಿಲ್ಲ, ಈ ವಿಷಯದಲ್ಲಿ ತಪ್ಪು ಸಂವಹನ ನಡೆದಿದೆ, ತಮ್ಮ ಗಮನಕ್ಕೆ ತಾರದೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಹೇಳಿದರು.

ಈ ಪ್ರಕರಣ ಬಗ್ಗೆ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಬಳಿ ಮಾತನಾಡುತ್ತೇನೆ. ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ ಎಂದು ಶ್ರೀರಾಮುಲು ಹೇಳಿದರು.

ಘಟನೆಯ ಬಗ್ಗೆ ಯಾವುದೇ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡದಂತೆ ಸಚಿವ ಶ್ರೀರಾಮುಲು ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡೀಯೂರಪ್ಪ ಸೂಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ತನ್ನ ಆಪ್ತ ಸಹಾಯಕನ ಬಂಧನದದಿಂದಾಗಿ ವಿಜಯೇಂದ್ರ ವಿರುದ್ಧ ಮುನಿಸಿಕೊಂಡಿರುವ ಶ್ರೀರಾಮುಲು ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಬಿಜೆಪಿ ವಿಜಯಪುರ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ನಾಯಕರು ಈ ಹಿಂದೆ ಬಿ ವೈ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದನ್ನು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಶ್ರೀರಾಮುಲು ಅವರಿಗೂ ಸೂಚಿಸದೆ ಆಪ್ತ ಸಹಾಯಕನನ್ನು ಬಂಧಿಸಿರುವುದು ಶ್ರೀರಾಮುಲು ಅವರಿಗೆ ಘಾಸಿ ಉಂಟು ಮಾಡಿದ್ದು, ಇದು ಪಕ್ಷದಲ್ಲಿ ಆಂತರಿಕ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Join Whatsapp