Home ಟಾಪ್ ಸುದ್ದಿಗಳು ಅನರ್ಹರ ನೇಮಕಾತಿಗೆ ಸಚಿವೆ ಶಶಿಕಲಾ ಜೊಲ್ಲೆ ಶಿಫಾರಸ್ಸು: ಹೈಕೋರ್ಟ್‌ನಿಂದ ರಾಜ್ಯ ಸರ್ಕಾರದ ಆದೇಶ ವಜಾ

ಅನರ್ಹರ ನೇಮಕಾತಿಗೆ ಸಚಿವೆ ಶಶಿಕಲಾ ಜೊಲ್ಲೆ ಶಿಫಾರಸ್ಸು: ಹೈಕೋರ್ಟ್‌ನಿಂದ ರಾಜ್ಯ ಸರ್ಕಾರದ ಆದೇಶ ವಜಾ

ಬೆಂಗಳೂರು: ಬಾಲಾಪರಾಧ ನ್ಯಾಯದಾನ ಆಯ್ಕೆ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವ ರಾಜ್ಯ ಆಯ್ಕೆ ಸಮಿತಿಗೆ ಕಾನೂನುಬಾಹಿರವಾಗಿ ಇಬ್ಬರು ಸದಸ್ಯರನ್ನು ನೇಮಕ ಮಾಡಿದ್ದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆದೇಶವನ್ನು ಕರ್ನಾಟಕ ಹೈಕೋರ್ಟ್ ಗೆ ರದ್ದುಪಡಿಸಿದೆ.


ಅಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ, ಹಾಲಿ ಹಿಂದೂ ಧಾರ್ಮಿಕ ದತ್ತಿ, ಹಜ್ ಮತ್ತು ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ನಿರ್ದೇಶನದಂತೆ ಸದಸ್ಯರನ್ನು ನೇಮಕ ಮಾಡಲಾಗಿತ್ತು.
ಬಾಲಾಪರಾಧ ನ್ಯಾಯದಾನ ಆಯ್ಕೆ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವ ರಾಜ್ಯ ಆಯ್ಕೆ ಸಮಿತಿಗೆ ಅನರ್ಹರನ್ನು ನೇಮಕ ಮಾಡಲಾಗಿದೆ ಎಂದು ಆಕ್ಷೇಪಿಸಿ ಸುಧಾ ಕಟ್ವಾ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ಆದೇಶ ನೀಡಿದೆ.


ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015ರ ನಿಯಮ 87ರಲ್ಲಿ ಉಲ್ಲೇಖಿಸಲಾಗಿರುವ ಅರ್ಹತೆಗಳನ್ನು ಬಾಗಲಕೋಟೆಯ ಲತಾ ಜಗದೀಶನಾರಾಯಣ್ ಮತ್ತು ಹುಬ್ಬಳ್ಳಿಯ ಎಸ್ ಎಂ ಬಡಾಸ್ಕರ್ ಹೊಂದಿಲ್ಲ ಎಂದು ಅವರ ಅರ್ಜಿಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ತಿರಸ್ಕರಿಸಿತ್ತು. ಅಗತ್ಯ ಅರ್ಹತೆಗಳನ್ನು ಹೊಂದಿಲ್ಲದಿದ್ದರೂ ಅಂದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರು ಏಕಪಕ್ಷೀಯವಾಗಿ ಲತಾ ಮತ್ತು ಬಡಾಸ್ಕರ್ ಅವರನ್ನು ನೇಮಕ ಮಾಡಿದ್ದರು. ಈ ಇಬ್ಬರ ಶಿಫಾರಸ್ಸಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಹಿ ಹಾಕಿರಲಿಲ್ಲ. ಸಚಿವೆಯ ನಿರ್ದೇಶನದಂತೆ ಅವರನ್ನು ನೇಮಕ ಮಾಡಲಾಗಿತ್ತು. ನಿಮಯಕ್ಕೆ ವಿರುದ್ಧವಾದ ಈ ನೇಮಕಾತಿಯನ್ನು ವಜಾ ಮಾಡಲಾಗಿದೆ ಎಂದು ಪೀಠವು ತೀರ್ಪಿನಲ್ಲಿ ಹೇಳಿದೆ.


ಮಕ್ಕಳಿಗೆ ರಕ್ಷಣೆ, ಅಗತ್ಯ ಸೌಲಭ್ಯಗಳು, ನಿರಾಶ್ರಿತ ಕೇಂದ್ರದಲ್ಲಿರುವ ಮಕ್ಕಳಿಗೆ ಪುನರುಜ್ಜೀವನ ಮತ್ತು ಗುಣಮಟ್ಟದ ಶುಶ್ರೂಷೆ, ಬಾಕಿ ಪ್ರಕರಣಗಳ ವಿಲೇವಾರಿ, ದೋಷಪೂರಿತ ಮತ್ತು ಅಪೂರ್ಣವಾದ ಪ್ರಕ್ರಿಯೆಯಿಂದ ದತ್ತು ತಡವಾಗುವುದು, ನಿಯಮಗಳ ಬಗ್ಗೆ ಅಸ್ಪಷ್ಟತೆ, ಸಂಸ್ಥೆಗಳಲ್ಲಿ ಜವಾಬ್ದಾರಿ ಮತ್ತು ಹೊಣೆಗಾರಿಕೆ ಕೊರತೆ, ಮಕ್ಕಳ ಮೇಲಿನ ಅಪರಾಧ ನಿಯಂತ್ರಣ ಮತ್ತು ಮಕ್ಕಳ ಮೇಲೆ ಅಪರಾಧ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸುವುದು, ದತ್ತು ಪಡೆದು ಮಕ್ಕಳನ್ನು ಮಾರಾಟ ಮಾಡುವುದು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿದ್ದು, ಇದನ್ನು ನಿಯಂತ್ರಿಸಲು ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ ಜಾರಿಗೆ ತರಲಾಗಿದೆ. ಸಚಿವೆಗೆ ಸಂಬಂಧಪಟ್ಟವರನ್ನು ನೇಮಕ ಮಾಡಬೇಕು ಎಂಬ ಏಕೈಕ ಕಾರಣಕ್ಕೆ ಅನರ್ಹರನ್ನು ನೇಮಿಸುವುದರಿಂದ ಕಾಯಿದೆಯ ಉದ್ದೇಶವೇ ವಿಫಲವಾಗಲಿದೆ. ಕಾನೂನಿನ ನಿಬಂಧನೆಗಳಿಗೆ ಅನುಗುಣವಾಗಿ ಕ್ಷೇತ್ರದಲ್ಲಿ ತಜ್ಞರನ್ನು ರಾಜ್ಯ ಸರ್ಕಾರವು ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಪೀಠವು ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.

ಬಡಾಸ್ಕರ್ ಅವರು ಬಾಲಾಪರಾಧ ನ್ಯಾಯದಾನ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015ರ ನಿಯಮ 87ರಲ್ಲಿ ಉಲ್ಲೇಖಿಸಲಾಗಿರುವ ಅರ್ಹತೆಗಳನ್ನು ವಕೀಲರಾಗಿರುವ ಎಸ್ ಎಂ ಬಡಾಸ್ಕರ್ ಹೊಂದಿಲ್ಲ ಎಂದು ಪಿಐಎಲ್ನಲ್ಲಿ ಆಕ್ಷೇಪಿಸಲಾಗಿತ್ತು. ಬಡಾಸ್ಕರ್ ಅವರ ಸ್ವವಿವರದಲ್ಲಿ ಮಕ್ಕಳ ರಕ್ಷಣೆ ಅಥವಾ ಅಭಿವೃದ್ಧಿ ವಿಚಾರದಲ್ಲಿ ಏಳು ವರ್ಷ ಕೆಲಸ ಮಾಡಿರುವ ಕುರಿತು ಉಲ್ಲೇಖಿಸಲಾಗಿಲ್ಲ ಎಂದು ಹೇಳಲಾಗಿದೆ. ಲತಾ ಜಗದೀಶನಾರಾಯಣ್ ಅವರ ವಿಚಾರದಲ್ಲಿ ಮಕ್ಕಳ ರಕ್ಷಣೆ ಅಥವಾ ಅಭಿವೃದ್ಧಿ ವಿಚಾರಕ್ಕೆ ಒಳಪಡದ ಜಲಸಂವರ್ಧನೆ ಯೋಜನಾ ಸಂಘದಲ್ಲಿ ಕೆಲಸ ಮಾಡಿರುವ ಪ್ರತಿಯನ್ನು ಲಗತ್ತಿಸಲಾಗಿತ್ತು. ಉಭಯ ಸದಸ್ಯರು ಕಾನೂನಿನ ಅಡಿ ಅರ್ಹತೆಗಳನ್ನು ಹೊಂದಿಲ್ಲ ಎಂದು ಪೀಠ ಹೇಳಿದೆ.


ಅರ್ಜಿದಾರೆಯನ್ನು ವಕೀಲ ಎಸ್ ಉಮಾಪತಿ ಪ್ರತಿನಿಧಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಮಕ್ಕಳ ಸಮಗ್ರ ರಕ್ಷಣಾ ಯೋಜನೆಯ ನಿರ್ದೇಶಕರನ್ನು ಸರ್ಕಾರಿ ವಕೀಲ ಕಿರಣ್ ಕುಮಾರ್, ಲತಾ ಜಗದೀಶ್ನಾರಾಯಣ್ ಅವರನ್ನು ವಕೀಲ ಲಕ್ಷ್ಮಿನಾರಾಯಣ್ ಹೆಗಡೆ ಮತ್ತು ಬಡಾಸ್ಕರ್ ಅವರನ್ನು ವಕೀಲ ಗಣಪತಿ ಭಟ್ ವಜ್ರಾಲಿ ಪ್ರತಿನಿಧಿಸಿದ್ದರು.

Join Whatsapp
Exit mobile version