Home ಟಾಪ್ ಸುದ್ದಿಗಳು ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸುವಂತೆ ಸಿಎಂಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸುವಂತೆ ಸಿಎಂಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

ಬೆಂಗಳೂರು : ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸುವಂತೆ ಸಿಎಂ ಸಿದ್ದರಾಮಯ್ಯಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ.


ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ವಿಶ್ವಗುರು ಬಸವಣ್ಣ ನವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ರೆಂದು ಸರ್ಕಾರದ ಪರವಾಗಿ ಘೋಷಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದೇನೆ. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಭಾರತ ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಗುರು ಬಸವಣ್ಣನವರು ಅಸ್ಪೃಶ್ಯತೆ ವಿರುದ್ಧ ಚಳುವಳಿ ರೂಪಿಸಿ ದೀನ, ದಲಿತ, ಶೋಷಿತ ಸಮಾಜದ ಸಮಾನತೆಗೆ ಧ್ವನಿ ಎತ್ತಿದ ಇತಿಹಾಸದ ಮೊದಲ ನಾಯಕ.ಕಲ್ಯಾಣದ ಅನುಭವ ಮಂಟಪದ 770 ಶರಣ-ಶರಣೇಯರನ್ನು ಹಾಗೂ ಸಾವಿರಾರು ಜಂಗಮರನ್ನು ಒಗ್ಗೂಡಿಸಿ ಕನ್ನಡದಲ್ಲಿ ವಚನ ಸಂಸ್ಕೃತಿಯನ್ನು ಪಸರಿಸಿ, ಸಮಾನತೆಯ ಸಂದೇಶ ಸಾರಿದ್ದು ಗುರು ಬಸವಣ್ಣನವರು.


12ನೇ ಶತಮಾನದಲ್ಲಿಯೇ ಗುರು ಬಸವಣ್ಣನವರು ಅನುಭವ ಮಂಟಪದಲ್ಲಿ ಸರ್ವ ಸಮುದಾಯದ ಜನರಿಗೂ ಅವಕಾಶ ಕಲ್ಪಿಸಿ ಸಮಾನತೆಯನ್ನು ಪ್ರತಿಪಾದಿಸಿದ್ದರು. ಮುಂದೆ ಸ್ವಾತಂತ್ರದ ನಂತರ ಬಾಬಾ ಸಾಹೇಬ್ ಡಾ|| ಬಿ.ಆರ್. ಅಂಬೇಡ್ಕರ್ರವರು ಭಾರತ ಸಂವಿಧಾನವನ್ನು ರಚಿಸಿ ದೇಶದಲ್ಲಿ ಸರ್ವರಿಗೂ ಸಮಾನತೆಯನ್ನು ಕಲ್ಪಿಸಿದರು.


“ಕಾಯಕವೇ ಕೈಲಾಸ, ಅರಿವೇ ಗುರು” ಎಂದು ಸಾಮಾಜಿಕ ಪ್ರಜ್ಞೆ ಮೂಡಿಸಲು ತಮ್ಮ ಜೀವನವಿಡಿ ಶ್ರಮಿಸಿದ ವಿಶ್ವಗುರು ಬಸವಣ್ಣನವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ರೆಂದು ಅಧಿಕೃತವಾಗಿ ಘೋಷಿಸುವುದರಿಂದ ಇಡೀ ನಾಡಿಗೆ ಸಂತಸವನ್ನು ಉಂಟು ಮಾಡುವುದಲ್ಲದೇ ನಮ್ಮ ರಾಜ್ಯ ಸರ್ಕಾರದ ಗರಿಮೆಯನ್ನು ಹೆಚ್ಚಿಸಿದಂತಾಗುತ್ತದೆ. ಆದ್ದರಿಂದ ವಿಶ್ವಗುರು ಬಸವಣ್ಣನವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ರೆಂದು ಘೋಷಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Join Whatsapp
Exit mobile version