Home ಟಾಪ್ ಸುದ್ದಿಗಳು ಜನಸ್ನೇಹಿ ಪೊಲೀಸ್ ಅಭಿಯಾನ: QR ಕೋಡ್ ಉದ್ಘಾಟಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಜನಸ್ನೇಹಿ ಪೊಲೀಸ್ ಅಭಿಯಾನ: QR ಕೋಡ್ ಉದ್ಘಾಟಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ನಮ್ಮ ನಡೆ ನುಡಿಯಲ್ಲಿ ಪಾರದರ್ಶಕತೆ ಇದ್ದಾಗ, ಕಟ್ಟುನಿಟ್ಟಿನ ಕರ್ತವ್ಯಪ್ರಜ್ಞೆ ಮತ್ತು ನಮ್ಮ ವರ್ತನೆ ಸರಿ ಇದ್ದಾಗ ಮಾತ್ರ ಜನಸಾಮಾನ್ಯರು ನಮ್ಮನ್ನು ನಂಬುತ್ತಾರೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಜನಸ್ನೇಹಿ ಅಭಿಯಾನ‌ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪೊಲೀಸರು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಕರ್ತವ್ಯ ನಿರ್ವಹಣೆಯಲ್ಲಿ ಕೆಲ ಪೊಲೀಸರು ಅನಾರೋಗ್ಯಕ್ಕೂ ತುತ್ತಾಗಿದ್ದಾರೆ‌. ಒಂದೆಡೆ ಕರ್ತವ್ಯ, ಮತ್ತೊಂದೆಡೆ ವಿಐಪಿಗಳ ಭದ್ರತೆಯ ನಡುವೆಯೂ ಕೆಲಸ ಮಾಡಬೇಕಾಗುತ್ತದೆ. ಸರ್ಕಾರ ನಿಮ್ಮ ಸಮಸ್ಯೆಗಳಿಗೆ ತೊಂದರೆಗಳ ಪರಿಹಾರಕ್ಕೆ ನಿಮ್ಮೊಂದಿಗೆ ಸದಾ ಇದೆ ಎಂದು ಅಭಯ ನೀಡಿದರು.

ಕಲಬುರಗಿ ಪೊಲೀಸ್ ವ್ಯವಸ್ಥೆಯನ್ನು ಜನ ಸ್ನೇಹಿಯಾಗಿಸುವತ್ತ ಮಹತ್ವಾಕಾಂಕ್ಷಿ ಹೆಜ್ಜೆ ಇರಿಸಲಾಗಿದ್ದು ಕಲಬುರಗಿ ಜಿಲ್ಲೆಯಲ್ಲಿ “ಜನಸ್ನೇಹಿ ಪೊಲೀಸ್ ಅಭಿಯಾನ” ಜಾರಿಗೊಳಿಸಲಾಗುತ್ತಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಬರುವ ಜನಸಾಮಾನ್ಯರು ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ವರ್ತನೆ ಕುರಿತಂತೆ QR ಕೋಡ್ ಮೂಲಕ ದಾಖಲಿಸಬಹುದಾಗಿದೆ. ಈ ಕೋಡ್ ಅಳವಡಿಕೆ‌ ಹಿಂದೆ ನಿಮ್ಮ ಕರ್ತವ್ಯ ನಿರ್ವಹಣೆ‌‌ ಕಣ್ಗಾವಲು ಜೊತೆಗೆ ಜನಸಾಮಾನ್ಯರ ಹಿತಾಸಕ್ತಿ ಕೂಡಾ ಉದ್ದೇಶವಿದೆ. QR ಕೋಡ್ ಅನ್ನು ನಗರದ ಎಲ್ಲಾ ಪೊಲೀಸ್ ಠಾಣೆ ಗಳು ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ ಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕರು ಉಪಯೋಗಿಸುವ ದ್ವಾರಗಳ ಬಳಿ ಲಗತ್ತಿಸಲಾಗುವುದು. ಅಲ್ಲದೇ ಜಿಲ್ಲೆಯ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಕೂಡ ಇಲಾಖೆ ವತಿಯಿಂದ ಲಗತ್ತಿಸಲಾಗುವುದು ಎಂದರು.

ಸಮಸ್ಯೆಗಳ ಪರಿಹಾರಕ್ಕಾಗಿ, ನ್ಯಾಯಕ್ಕಾಗಿ ದೂರು ಸಲ್ಲಿಸಲು, ವ್ಯಾಜ್ಯ ಪರಿಹಾರಕ್ಕಾಗಿ ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರೊಡನೆ ಜನಸ್ನೇಹಿಯಾಗಿ ವರ್ತಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆ ಮಾಡುವ ಉದ್ದೇಶದಿಂದ “ಜನಸ್ನೇಹಿ ಪೊಲೀಸ್ ಅಭಿಯಾನ ” ಜಾರಿ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಜನಸಾಮಾನ್ಯರೊಂದಿಗೆ ಪೊಲೀಸರು ಉತ್ತಮ ಭಾಂದವ್ಯ ಹೊಂದಿದಾಗ ಮಾತ್ರ ಸಮಾಜದಲ್ಲಿ ಏನು ನಡೆಯುತ್ತಿದೆ ಎನ್ನುವ ಮಾಹಿತಿ‌ ಸಿಗುತ್ತದೆ ಎಂದ ಸಚಿವರು ಜನರ ನಡುವೆ ನಡೆಯುವ ಜಗಳ ಮನಸ್ತಾಪ ಮತ್ತು ಕೋಮುಗಲಭೆಯನ್ನು ತಡೆಯಲು ಗುಪ್ತಚರ ಇಲಾಖೆಗೆ ಇದು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತಷ್ಟು ಜನಸ್ನೇಹಿಯಾಗುವ ಅನಿವಾರ್ಯತೆ ಇದೆ ಎಂದು ಅವರು ಒತ್ತಿ ಹೇಳಿದರು.

ಬೆಂಗಳೂರಿನಲ್ಲಿ ಈ ತರಹದ ಕೋಡ್ ಅವಳವಡಿಕೆ ಆಗಿದೆ. ಆ ನಂತರ ಕಲಬುರಗಿ ಯಲ್ಲಿ ಈ ಕೋಡ್ ಅಳವಡಿಸಲಾಗುತ್ತಿದೆ. ಹಾಗಾಗಿ ಇದಕ್ಕೆ ಕಾರಣೀಕರ್ತರಾದ ಗೃಹ ಸಚಿವ ಡಾ‌ ಜಿ.‌ಪರಮೇಶ್ವರ ಹಾಗೂ ಡಿಜಿ  ಅವರಿಗೆ ಧನ್ಯವಾದಗಳು ಎಂದು ಸಚಿವರು ಹೇಳಿದರು.

ಇದೇ ತರಹದ QR ಕೋಡ್ ನ್ನು ಸಚಿವರ ಕಾರ್ಯಾಲಯದಲ್ಲಿ ಕೂಡಾ ಅಳವಡಿಸಲಾಗುತ್ತಿದೆ. ಅಲ್ಲಿ ಜನ ಸಮಾನ್ಯರು ನನ್ನ ವಿರುದ್ದವೂ ಕೂಡಾ ದೂರು ಸಲ್ಲಿಸಬಹುದಾಗಿದೆ ಎಂದು ಸಚಿವರು ಹೇಳಿದರು.

ವೇದಿಕೆಯ ಮೇಲೆ ಶಾಸಕರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರು, ಈಶಾನ್ಯ ವಲಯ ಡಿಐಜಿ ಅನುಪಮ್ ಅಗರವಾಲ, ನಗರ ಪೊಲೀಸ್ ಆಯುಕ್ತರಾದ ಆರ್. ಚೇತನ, ಎಸ್ ಪಿ ಇಶಾಪಂತ್, ಡಿಸಿಪಿ ಅಡ್ಡೂರು ಶ್ರೀನಿವಾಸಲು , ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂ ಸಿಇಓ ಭಂವರ ಕುಮಾರ ಮೀನಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.

Join Whatsapp
Exit mobile version