ಬೆಂಗಳೂರು: ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ವರ್ಷ ಪೂರ್ತಿ ರಾಜ್ಯಾದ್ಯಂತ ಕರ್ನಾಟಕದ ಸಾಂಸ್ಕೃತಿಕ ಹಾಗೂ ಪರಂಪರೆ ಬಿಂಬಿಸುವ ಕಾರ್ಯಕ್ರಮ ರೂಪಿಸುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಾಹಿತಿಗಳ ಜೊತೆ ಸಭೆ ನಡೆಸಲಾಯಿತು. ಸಭೆಯಲ್ಲಿ ಹಲವು ಉತ್ತಮ ಸಲಹೆಗಳು ಬಂದಿವೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಸಭೆಯಲ್ಲಿ ಸಾಹಿತಿಗಳು, ರಂಗಕರ್ಮಿಗಳು, ಕಲಾವಿದರೊಂದಿಗೆ ಸಮಾಲೋಚನಾ ಸಭೆ ನಡೆಸಿ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ನ.1ಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ `ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯದಡಿ ಕಾರ್ಯಕ್ರಮ ನಡೆಸುವ ಬಗ್ಗೆ ಆಯವ್ಯಯದಲ್ಲಿ ಈಗಾಗಲೇ ಘೋಷಣೆ ಮಾಡಲಾಗಿದೆ.
ರಾಜ್ಯದ ನಾಲ್ಕು ಕಂದಾಯ ವಿಭಾಗವಾರು ಸಾಹಿತಿಗಳ ಸಭೆ ಆಯೋಜನೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಬೆಂಗಳೂರು ವಿಭಾಗದಲ್ಲಿ ಸಾಹಿತಿಗಳ ಸಭೆ ನಡೆಸಲಾಗಿದೆ. ಆ.22ಕ್ಕೆ ಬೆಳಗಾವಿ, ಆ.25 ರಂದು ಮೈಸೂರು ಹಾಗೂ 28ರಂದು ಕಲಬುರಗಿಯಲ್ಲಿ ಸಾಹಿತಿ, ರಂಗಕರ್ಮಿ ಹಾಗೂ ಹಿರಿಯ ಕಲಾವಿದರ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಕರ್ನಾಟಕದ ಪರಂಪರೆ, ಕನ್ನಡದ ಇತಿಹಾಸ ಹಾಗೂ ಸಂಸ್ಕೃತಿ ಬಿಂಬಿಸುವ ಹಿನ್ನೆಲೆಯಲ್ಲಿ ಕನ್ನಡ ರಥ ರಾಜ್ಯದೆಲ್ಲೆಡೆ ಸಂಚಾರ ಮಾಡಲಿದೆ. ಶಾಲಾ ಮತ್ತು ಕಾಲೇಜುಗಳಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ, ರಾಜ್ಯದ ಸಿದ್ಧಾಪುರದಲ್ಲಿರುವ ಏಕೈಕ ಭುವನೇಶ್ವರಿ ದೇವಾಲಯವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದು, ಕನ್ನಡದ ಮಾಹಿತಿಯನ್ನೊಳಗೊಂಡ ಸಂಚಾರಿ ವಾಹನ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗಿಯಾಗಿದ್ದ ಗಣ್ಯರ ಸನ್ಮಾನ ಸೇರಿದಂತೆ ಹೀಗೆ ಹಲವು ಸಲಹೆಗಳು ಬಂದಿವೆ ಎಂದಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮಂಡ್ಯದಲ್ಲಿ ನಡೆಸಲು ಯಾವುದೇ ಅಡೆತಡೆಗಳಿಲ್ಲ. ಎಲ್ಲರೊಂದಿಗೆ ಈ ಬಗ್ಗೆ ಚರ್ಚೆ ಮಾಡಿ ಸಮ್ಮೇಳನದ ದಿನಾಂಕ ನಿಗದಿ ಮಾಡಲಾಗುವುದು. ಈ ಬಗ್ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಅವರ ಬಳಿ ಮಾತನಾಡಿದ್ದೇನೆ ಎಂದಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಜೆಟ್‍ನಲ್ಲಿ ಕಡಿಮೆ ಅನುದಾನ ನೀಡಿದ್ದು, ಕಾರ್ಯಕ್ರಮ ಆಯೋಜನೆಗೆ ಹಣವಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾರ್ಯಕ್ರಮ ನಡೆಸಲು ಹಣಕಾಸಿನ ಕೊರತೆ ಇಲ್ಲ. ಹೆಚ್ಚಿನ ಅನುದಾನದ ಅಗತ್ಯ ಬಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸಾಹಿತಿಗಳಾದ ಪ್ರೋ.ಎಸ್.ಸಿದ್ದರಾಮಯ್ಯ, ಮುಖ್ಯಮಂತ್ರಿ ಚಂದ್ರು, ಮನು ಬಳಿಗಾರ್, ಹಂಸಲೇಖ, ಮಾಜಿ ಸಚಿವರಾದ ಉಮಾಶ್ರೀ, ಜಯಮಾಲಾ ಸೇರಿದಂತೆ ಪ್ರತಿಯೊಬ್ಬರು ಸಲಹೆ ನೀಡಿದ್ದಾರೆ. ಇನ್ನೂ ಉಳಿದ ಮೂರು ವಿಭಾಗಗಳಲ್ಲಿ ಸಭೆ ನಡೆಯಲಿದೆ. ಎಲ್ಲರ ಸಲಹೆ ಕ್ರೋಢೀಕರಣ ಮಾಡಿದ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಸಾಹಿತಿ ಚಂದ್ರಶೇಖರ್ ಕಂಬಾರ, ಬಿ.ಟಿ.ಲಲಿತಾನಾಯಕ್, ನರಹಳ್ಳಿ ಬಾಲಕೃಷ್ಣ, ಚಿತ್ರ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು, ಟಿ.ಎನ್ ಸೀತಾರಾಮ್, ಕಸಪಾ ಅಧ್ಯಕ್ಷ ಮಹೇಶ್ ಜೋಶಿ, ರಂಗಕರ್ಮಿಗಳಾದ ಕಪ್ಪಣ್ಣ, ನಾಗರಾಜ್ ಮೂರ್ತಿ, ಪ್ರೋ.ಕೆ.ಇ ರಾಧಾಕೃಷ್ಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ವಿಶ್ವನಾಥ್ ಹಿರೇಮಠ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಅಲ್ಲದೇ ಸಭೆಯಲ್ಲಿ ಸುಮಾರು 170ಕ್ಕೂ ಹೆಚ್ಚು ಸಾಹಿತಿಗಳು, ರಂಗಕರ್ಮಿ, ಕಲಾವಿದರು ಭಾಗಿಯಾಗಿದ್ದರು. ಇದೇ ವೇಳೆ ಸಭೆ ಕರೆದ ಸಚಿವ ತಂಗಡಗಿ ಅವರ ನಡೆಗೆ ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.