ಅಜಯ್ ಮಿಶ್ರಾ ಓರ್ವ ಕ್ರಿಮಿನಲ್: ರಾಹುಲ್ ಗಾಂಧಿ
Prasthutha: December 16, 2021

ನವದೆಹಲಿ: ಲಖಿಂಪುರದಲ್ಲಿ ನಡೆದ ರೈತರ ಹತ್ಯೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಕ್ರಿಮಿನಲ್ ಪಾತ್ರ ನಿರ್ವಹಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ನೈತಿಕ ಹೊಣೆಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಲಖಿಂಪುರ ರೈತರ ಹತ್ಯೆಯಲ್ಲಿ ಶಾಮೀಲಾಗಿರುವ ಸಚಿವ ಅಜಯ್ ಮಿಶ್ರಾ ಅವರನ್ನು ಕ್ರಿಮಿನಲ್ ಎಂದು ಕರೆದ ರಾಹುಲ್ ಗಾಂಧಿ, ಅಜಯ ಮಿಶ್ರಾ ತಕ್ಷಣ ರಾಜೀನಾಮೆ ನೀಡಬೇಕೆಂದು ಲೋಕಸಭೆಯಲ್ಲಿ ಆಗ್ರಹಿಸಿದ ಬಳಿಕ ಭಾರೀ ಗದ್ದಲ ಏರ್ಪಟ್ಟ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಯ ವರೆಗೆ ಮುಂದೂಡಲಾಯಿತು.
ಲಖಿಂಪುರ ಹಿಂಸಾಚಾರದಲ್ಲಿ ನೇರ ಭಾಗಿಯಾಗಿರುವ ಅಶಿಶ್ ಮಿಶ್ರಾ ಅವರನ್ನು ಸಮರ್ಥಿಸಿದ ಅಜಯ್ ಮಿಶ್ರಾ ಕೂಡ ಕ್ರಿಮಿನಲ್ ಆಗಿದ್ದು, ಪ್ರಧಾನಿ ಮೋದಿ ಸಚಿವರನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ರಾಹುಲ್ ಟೀಕಿಸಿದರು.
ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಎಸ್.ಐ.ಟಿ ತಂಡ ಆಶಿಶ್ ಮಿಶ್ರಾ ಕೊಲೆ ಮಾಡುವ ಉದ್ದೇಶದಿಂದಲೇ ರೈತರ ಮೇಲೆ ಕಾರು ಹರಿಸಿದ್ದ ಎಂಬ ವರದಿಯನ್ನು ಸಲ್ಲಿಸಿದೆ ಎಂದು ಅವರು ಹೇಳಿದರು.
