Home ಟಾಪ್ ಸುದ್ದಿಗಳು ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ

ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ

ಧಾರವಾಡ: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗೆ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಭೇಟಿ ನೀಡಿದ್ದ ವೇಳೆ ತಮ್ಮ ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಘಟನೆಗೆ ಸಂಬಂಧಿಸಿ ಸ್ವತಃ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ತನಗೆ ಕಾಲುನೋವು ಇದ್ದಿದ್ದಕ್ಕೆ ಬಾಗಲು ಕಷ್ಟವಾದ ಕಾರಣ ಅಂಗರಕ್ಷಕ ಶೂ ಹಾಕಿದ್ದಾರೆಯೇ ನಿನಹ ಒಬ್ಬರಿಂದ ಶೂ ಹಾಕಿಸಿಕೊಳ್ಳಬೇಕೆಂಬ ದರ್ಪ ನನಗೆ ಇಲ್ಲ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, ಅಂಗ ರಕ್ಷಕರು ಶೂ ಹಾಕಿದ್ದಾರೆಂಬ ಸಂಗತಿಯು ವಿವಾದದ ಸ್ವರೂಪ ಪಡೆದಿರುವುದು ದುರದೃಷ್ಟಕರ ಬೆಳವಣಿಗೆ. ವೈಯಕ್ತಿಕವಾಗಿ ವ್ಯಕ್ತಿ ಗೌರವ ಮತ್ತು ಘನತೆಯಲ್ಲಿ ನಂಬಿಕೆ ಇಟ್ಟಿರುವ ನನಗೆ ಒಬ್ಬರಿಂದ ಶೂ ಹಾಕಿಸಿಕೊಳ್ಳಬೇಕೆಂಬ ದರ್ಪದ ಇರಾದೆ ಇಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಿಂದ ಬಾಗುವುದು ಕಷ್ಟ. ಹಾಗಾಗಿ ನಮ್ಮ ಆತ್ಮೀಯ ವಲಯದಿಂದ ಸಹಾಯ ಪಡೆದಿದ್ದೇನೆ. ಬಹು ವರ್ಷಗಳ ಕಾಲದಿಂದ ನನ್ನೊಡನೆಯೇ ಒಂದು ಕುಟುಂಬದಂತಿರುವ ನಮ್ಮ ಕೆಲವು ಸಿಬ್ಬಂದಿ ಬಳಿ ಕಾಲಿನ ಸಮಸ್ಯೆ ಹಿನ್ನೆಲೆ ಪಡೆದುಕೊಂಡಿರುವ ಈ ಸಹಾಯಕ್ಕೆ ಮಾನವೀಯ ನೆಲೆ ಇದೆ. ಅನಗತ್ಯವಾಗಿ ಇದಕ್ಕೆ ಅಹಂಕಾರ, ಅಧಿಕಾರದ ಅಮಲು ಎಂಬ ಶಬ್ಧಗಳನ್ನು ಬಳಸುವುದು ಸರಿಯಾದ ಕ್ರಮವಲ್ಲ. ನನ್ನನ್ನು ಬಲ್ಲ ಎಲ್ಲರಿಗೂ ವ್ಯಕ್ತಿ ಗೌರವಕ್ಕೆ ಸಂಬಂಧಿಸಿದ ನನ್ನ ನಿಲುವುಗಳ ಬಗ್ಗೆ ಚೆನ್ನಾಗಿಯೇ ತಿಳಿದಿದೆ. ಹಾಗಾಗಿ ಈ ಬಗ್ಗೆ ಸ್ವಯಂ ವಿವರಣೆ ಕೊಡುವುದಾಗಲಿ, ಇಲ್ಲವೇ ಸ್ವಮರುಕ ಪಡುವುದಾಗಲಿ ನಾನು ಮಾಡುವುದಿಲ್ಲ. ಮೂಲತಃ ಸಂವಿಧಾನದ ಆಶಯಗಳ ಪ್ರಕಾರವೇ ಬದುಕುವ ನನಗೆ ಸಮಾನತೆ, ವ್ಯಕ್ತಿ ಗೌರವ, ಪ್ರೀತಿ ವಿಶ್ವಾಸ ಹೊರತುಪಡಿಸಿ ಇತರೆ ಸಂಗತಿಗಳಲ್ಲಿ ಆಸಕ್ತಿ ಇಲ್ಲ. ದೈಹಿಕ ತೊಂದರೆಗಾಗಿ ಪಡೆದ ಸಹಾಯವನ್ನು ಸಂಕುಚಿತ ಮನಸ್ಸಿನಿಂದ ನೋಡಬಾರದೆಂದು ನಮ್ಮ ಮಾಧ್ಯಮ ಮಿತ್ರರಲ್ಲಿ ನಾನು ಮನವಿ ಮಾಡುತ್ತೇನೆ. ಇನ್ನು ಅಗತ್ಯ ಸಹಾಯಕ್ಕಾಗಿ ನನ್ನ ಅಂಗರಕ್ಷಕನಿಗೆ ನನ್ನ ಧನ್ಯವಾದಗಳು.

Join Whatsapp
Exit mobile version