ಮಂಗಳೂರು: ಉಳ್ಳಾಲ ಮತ್ತು ಕಂಕನಾಡಿ ಪೋಲಿಸ್ ಠಾಣಾ ವ್ಯಾಪ್ತಿಯ ಅಡಂಕುದ್ರು ಮತ್ತು ಕಡೆಕ್ಕಾರ್ ಪ್ರದೇಶಗಳಲ್ಲಿಗಣಿ,ಭೂ ಮತ್ತು ಪೋಲಿಸ್ ಇಲಾಖೆಯ ಭ್ರಷ್ಟ ಅಧಿಕಾರಿಗಳ ಸಂಪೂರ್ಣ ಬೆಂಬಲದೊಂದಿಗೆ ಮತ್ತು ಬೆಂಗಾವಲಿನೊಂದಿಗೆ ಎಗ್ಗಿಲ್ಲದೆ ನಿರಾತಂಕವಾಗಿ ಮರಳು ಮಾಫಿಯಾ ನಡೆಯುತ್ತಿದೆ ಎಂದು ಎಸ್‌ಡಿಪಿಐ ಉಳ್ಳಾಲ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಅಡಂಕುದ್ರು ಮತ್ತು ಕಡೆಕ್ಕಾರ್ ಎಂಬಲ್ಲಿಂದ ನಿರಂತರವಾಗಿ ಆಸುಪಾಸಿಗೆ ಮತ್ತು ನೆರೆಯ ಕೇರಳ ರಾಜ್ಯಕ್ಕೂ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದ್ದರೂ ಪೋಲಿಸ್ ಇಲಾಖೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ. ಉಳ್ಳಾಲ ಮತ್ತು ಕಂಕನಾಡಿ ಪೋಲಿಸ್ ಠಾಣೆ ಸಂಪೂರ್ಣವಾಗಿ ಮರಳು ಮಾಫಿಯಾದ ನಿಯಂತ್ರಣದಲ್ಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಲ್ ಇನ್ಸ್‌ಪೆಕ್ಟರ್, ಎಸಿಪಿ ಸೇರಿದಂತೆ ಉನ್ನತ ಅಧಿಕಾರಿಗಳಿಗೂ ಇದರ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿಯಾದ ನಂತರ ಈ ಅಧಿಕಾರಿಗಳು ಅಕ್ರಮ ಮರಳು ಮಾಫಿಯಾದ ಬಗ್ಗೆ ಮಾಹಿತಿ ನೀಡುವವರು ಕರೆ ಮಾಡಿದರು ಕರೆ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.
ಇವರಿಗೆ ಹಫ್ತಾ ನೀಡದೆ ಜನಸಾಮಾನ್ಯರು ತನ್ನ ಅಗತ್ಯ ಕೆಲಸಕಾರ್ಯಗಳಿಗೆ ಮರಳು ಸಾಗಾಟ ಮಾಡಿದರೆ ಹಾಗೂ ಪ್ರಭಾಕರ್ ಭಟ್ ವಿರುದ್ಧ ಪ್ರತಿಭಟನೆ ನಡೆಸಿದ ಡಿವೈಫ್ಐ ಕಾರ್ಯಕರ್ತರ ಮೇಲೆ ಕೂಡಲೇ ಅಲರ್ಟ್ ಆಗಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುತ್ತಾರೆ. ತನ್ನ ವ್ಯಾಪ್ತಿಯಲ್ಲಿ ಬಹಿರಂಗವಾಗಿ ವ್ಯಾಪಕವಾಗಿ ಎಗ್ಗಿಲ್ಲದೆ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಮೌನ ವಹಿಸಿರುವ ಉಳ್ಳಾಲ ಇನ್ಸ್‌ಪೆಕ್ಟರ್‌ರವರ ನಡೆ ಖಂಡನೀಯ ಎಂದು ಹೇಳಿದ್ದಾರೆ.
ಅದೇ ರೀತಿ ಪ್ರಭಾವಿಗಳು ಅಥವಾ ಶಾಸಕ ಯು.ಟಿ. ಖಾದರ್ ರವರ ಆಪ್ತರು ಈ ದಂಧೆಯಲ್ಲಿ ಹಿಡಿಯಲ್ಪಟ್ಟರೆ ಯಾವುದೇ ಕ್ರಮ ಕೈಗೊಳ್ಳದೆ, ಅವರ ವಾಹನವನ್ನು ಮುಟ್ಟುಗೋಲು ಹಾಕದೆ ಪ್ರಭಾವಿಗಳ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಾರೆ ಎಂದೂ ಅವರು ಆರೋಪಿಸಿದ್ದಾರೆ.
ಅಕ್ರಮ ಮರಳು ಮಾಫಿಯಾದ ಒಂದು ವಾಹನಕ್ಕೆ ಇಂತಿಷ್ಟು ಎಂದು ಉಳ್ಳಾಲ ಮತ್ತು ಕಂಕನಾಡಿ ಪೋಲಿಸ್ ಠಾಣೆಯಲ್ಲಿ ಅನಧಿಕೃತ ನಿಯಮ ಮಾಡಿ ದಿನಂಪ್ರತಿ ವಸೂಲಿ ಮಾಡಲಾಗುತ್ತಿದೆ. ಅಕ್ರಮ ಮರಳು ಮಾಫಿಯಾದಲ್ಲಿ ತೊಡಗಿರುವ ದಂದೆಕೋರರು ಸ್ಥಳೀಯ ಶಾಸಕರ ಆಪ್ತರಾಗಿದ್ದಾರೆ ಎಂದು ನೇರವಾಗಿ ಹೇಳಿದ್ದಾರೆ.
ಇನ್ನೊಂದು ಭಾಗದಲ್ಲಿ ಕರ್ನಾಟಕದ ಗಡಿಭಾಗ ತಲಪಾಡಿಯ ಯು.ಟಿ ಖಾದರ್ ಆಪ್ತ ಗ್ರಾ.ಪಂ ಸದಸ್ಯನೋರ್ವ ಅಕ್ರಮವಾಗಿ ಮರಳು ಮಾಫಿಯಾ ಮಾಡುವುದಲ್ಲದೇ ಟೋಲ್ ನಲ್ಲಿ ಒಂದು ಗಾಡಿಗೆ 300 ರುಪಾಯಿಯಂತೆ ಹಫ್ತಾ ಪಾವತಿ ಮಾಡಿ ಕೇರಳಕ್ಕೆ ಅನಧಿಕೃತವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ ಎಂದು ಉಬೈದ್ ಅಮ್ಮೆಂಬಳ ಹೇಳಿದ್ದಾರೆ.
ಈ ಬಗ್ಗೆ ಮೇಲಾಧಿಕಾರಿಗಳಿಗೆ,ಸ್ಥಳೀಯ ಪೋಲಿಸರಿಗೆ,ಹಾಗೂ ಗಣಿ ಮತ್ತು ಭೂ ಇಲಾಖೆಯ ಅಧಿಕಾರಿಗಳಿಗೂ ಎಷ್ಟೇ ಬಾರಿ ದೂರು ದಾಖಲು ಮಾಡಿದರೂ ಕೂಡ ಅವರು ಯಾವುದೇ ಕ್ರಮವನ್ನು ಜರುಗಿಸದೆ ಅಕ್ರಮ ಮರಳು ಮಾಫಿಯಾಕ್ಕೆ ನೇರ ಬೆಂಬಲ ನೀಡಿರುವುದು ಮೇಲ್ನೋಟಕ್ಕೆ ಕಾಣಿಸಿದೆ. ರಾಷ್ಟ್ರೀಯ ಹೆದ್ದಾರಿ ಪಂಪ್‌ವೆಲ್, ಎಕ್ಕೂರು ಹಾಗೂ ಕಲ್ಲಾಪು ಭಾಗದಲ್ಲಿ ಈ ಅಕ್ರಮ ಮಾಫಿಯಾ ದಂಧೆಕೋರರ ಸುಮಾರು ಐವತ್ತು ಮಂದಿಯ ತಂಡ ಅಲ್ಲಿ ಸೇರಿರುತ್ತಾರೆ. ಇದರ ಸಿಸಿ ಟಿವಿ ಫೂಟೇಜ್ ಕೂಡ ಇವೆ.ಅದಲ್ಲದೇ ಪೋಲಿಸ್ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಗಸ್ತು ಪಡೆ ವಾಹನ ಮತ್ತು ರಾತ್ರಿ ಗಸ್ತು ಪೋಲೀಸರು ಈ ಅಕ್ರಮ ಮಾಫಿಯಾ ಪಡೆಯ ಟಿಪ್ಪರ್‌ಗಳನ್ನು ಹಿಡಿಯುವ ಬದಲಿಗೆ ಅವರಿಗೆ ಬೆಂಗಾವಾಲಾಗಿ ಸಹಕಾರ ನೀಡಿ ಅವರು ನೀಡುವ ಎಂಜಲು ಕಾಸಿಗೆ ಕೈಯೊಡ್ಡಿ ಕಾನೂನನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಎಸ್ಡಿಪಿಐ ಮುಖಂಡ ಗಂಭೀರ ಆರೋಪ ಮಾಡಿದ್ದಾರೆ.
ಎ.ಸಿ.ಪಿ. ಕಛೇರಿಯಿಂದ ಕೇವಲ 500 ಮೀಟರ್ ಅಂತರದಲ್ಲಿ ಮತ್ತು ರಾಷ್ಟ್ರೀಯ ಸಂಚಾರಿ ದಕ್ಷಿಣ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಈ ಮರಳು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆದರೆ ಅಥವಾ ಸ್ಥಳೀಯ ಶಾಸಕರ ಒತ್ತಡದಿಂದ ಅಧಿಕಾರಿಗಳು ಮೌನ ವಹಿಸುವುದೇ ಆದರೆ ಜನಸಾಮಾನ್ಯರನ್ನು ಸೇರಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಈ ಪಕ್ಷವು ಹೋರಾಟವನ್ನು ನಡೆಸಲಿದೆ ಹಾಗೂ ಒಂದು ವೇಳೆ ಈ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸಿದಲ್ಲಿ ಇದರ ನೇರ ಹೊಣೆ ಪೋಲಿಸ್ ಇಲಾಖೆಯಾಗಿರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.