Home ಟಾಪ್ ಸುದ್ದಿಗಳು ಮೇಕೆದಾಟು: ತಮಿಳುನಾಡಿನ ನಿರ್ಣಯದ ವಿರುದ್ಧ ಖಂಡನಾ ನಿರ್ಣಯ ಮಂಡಿಸಲು ಸಿದ್ದರಾಮಯ್ಯ ಒತ್ತಾಯ

ಮೇಕೆದಾಟು: ತಮಿಳುನಾಡಿನ ನಿರ್ಣಯದ ವಿರುದ್ಧ ಖಂಡನಾ ನಿರ್ಣಯ ಮಂಡಿಸಲು ಸಿದ್ದರಾಮಯ್ಯ ಒತ್ತಾಯ

►ಪ್ರಧಾನಿ ಬಳಿಗೆ ಸರ್ವ ಪಕ್ಷ ನಿಯೋಗ ಕೊಂಡೊಯ್ಯಲು ಸಲಹೆ

ಬೆಂಗಳೂರು: ತಮಿಳುನಾಡಿನ ವಿಧಾನಸಭೆಯಲ್ಲಿ ಅಲ್ಲಿನ ಸರ್ಕಾರ ಮತ್ತು ಇತರೆ ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಲು ಒಂದು ಕಾನೂನು ಬಾಹಿರವಾದ ನಿರ್ಣಯವನ್ನು ನಿನ್ನೆ ಕೈಗೊಂಡಿವೆ. ಇಂಥ ನಿರ್ಣಯವನ್ನು ಮಾಡಲು ತಮಿಳುನಾಡು ವಿಧಾನಸಭೆಗೆ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ. ರಾಜಕೀಯವಾಗಿ ಕ್ಯಾತೆ ತೆಗೆಯಲು ಈ ನಿರ್ಣಯ ಮಾಡಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ವಿರೋಧಿಸಿ ಸದನದಲ್ಲಿ ಕೈಗೊಂಡಿರುವ ನಿರ್ಣಯದ ಬಗೆಗೆ ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ನಾವು ಮೇಕೆದಾಟು ಯೋಜನೆ ಮಾಡುತ್ತಿರುವುದು ಸಂವಿಧಾನಬದ್ಧವಾಗಿ ನಮ್ಮ ಪಾಲಿನ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳಲು. ಬೆಂಗಳೂರು ಮತ್ತು ಸುತ್ತಮುತ್ತಲಿನ ನಗರಗಳಿಗೆ ಕುಡಿಯುವ ನೀರು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದೆ. ಈ ಯೋಜನೆ ನಮ್ಮ ರಾಜ್ಯದ ಗಡಿಯೊಳಗೆ ಬರುತ್ತೆ. ಕನಕಪುರ ತಾಲೂಕಿನ ಕಾವೇರಿ ಸಂಗಮದ ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. 16/02/2018 ರಲ್ಲಿ ಸುಪ್ರೀಂ ಕೋರ್ಟ್ ನ ಅಂತಿಮ ಆದೇಶ ಬಂದಿದೆ. ಈ ಆದೇಶವನ್ನು ಎರಡೂ ರಾಜ್ಯಗಳು ಒಪ್ಪಿಕೊಂಡಿವೆ. ಒಂದು ಸಹಜ ವರ್ಷದಲ್ಲಿ 177.25 ಟಿಎಂಸಿ ನೀರನ್ನು ಬಿಳಿಗೊಂಡ್ಲುವಿನಿಂದ ತಮಿಳುನಾಡಿಗೆ ಬಿಡಬೇಕು ಎಂದು ತೀರ್ಪು ಹೇಳಿದೆ. ಇದರ ಅನುಷ್ಠಾನಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿದೆ. ಈ ನೀರನ್ನು ಪಡೆದುಕೊಳ್ಳುವುದು ಮಾತ್ರ ತಮಿಳುನಾಡಿಗಿರುವ ಹಕ್ಕು. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಈ ವರೆಗೆ ತಮಿಳುನಾಡಿಗೆ ಸುಮಾರು 582 ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿದು ಹೋಗಿದೆ. ತಮಿಳುನಾಡು ಕುಡಿಯುವ ನೀರಿನ ಉದ್ದೇಶಕ್ಕಾಗಿ ನಮ್ಮನ್ನು ಅಥವಾ ಕೇಂದ್ರ ಸರ್ಕಾರವನ್ನು ಕೇಳದೆ ತಮಗೆ ಬೇಕಾದ ಯೋಜನೆ ಮಾಡಿಕೊಂಡಿದ್ದಾರೆ ಎಂದರು.

ನಾವು ಬೆಂಗಳೂರು ನಗರಕ್ಕೆ ಕುಡಿಯುವ ನೀರು ಕೊಡಬೇಕು ಎಂದು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಕೊಟ್ಟಿದ್ದೇವೆ, ಇದು ಕೇಂದ್ರ ಜಲ ಆಯೋಗದ ಮುಂದಿದೆ. ಅವರು ಕೇಳಿದ ಹೆಚ್ಚುವರಿ ಮಾಹಿತಿಯನ್ನು ನೀಡಿದ್ದೇವೆ, ರೂ. 9,000 ಕೋಟಿಯ ವಿಸ್ತೃತ ಯೋಜನಾ ವರದಿ ನೀಡಿದ್ದೇವೆ. 67.14 ಟಿಎಂಸಿ ನೀರನ್ನು ಶೇಖರಿಸಿಟ್ಟು ಅದನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳೋದು ಮೇಕೆದಾಟು ಯೋಜನೆ ಉದ್ದೇಶ. ಬೆಂಗಳೂರು ನಗರದ ಸುಮಾರು 30% ಜನರಿಗೆ ಇನ್ನೂ ಕೂಡ ಕಾವೇರಿ ನೀರು ಸಿಗುತ್ತಿಲ್ಲ. ಸುಮಾರು ಒಂದೂವರೆ ಕೋಟಿ ಜನ ಇಲ್ಲಿ ವಾಸವಿದ್ದಾರೆ. ಈ ಜನ ಬೋರ್ ವೆಲ್, ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಇಂಥಾ ಅಂತಾರಾಷ್ಟ್ರೀಯ ಖ್ಯಾತಿಯ ನಗರಕ್ಕೆ ಕುಡಿಯುವ ನೀರು ಕೊಡಲು ಆಗ್ತಿಲ್ಲ ಎಂದರೆ ಹೇಗೆ? ಸುಪ್ರೀಂ ಕೋರ್ಟ್ ಬೆಂಗಳೂರು ನಗರಕ್ಕೆ 4.75 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಕಾವೇರಿ ನದಿಯ ಹೆಚ್ಚುವರಿ ನೀರನ್ನು ನಾವು ಬಳಕೆ ಮಾಡಿಕೊಳ್ತೇವೆ ಎಂದರೆ ರಾಜಕೀಯ ಕಾರಣಕ್ಕೆ ತಮಿಳುನಾಡಿನವರು ಕಾಲು ಕರೆದುಕೊಂಡು ನಮ್ಮ ಮೇಲೆ ಬರುತ್ತಿದ್ದಾರೆ, ಇದನ್ನು ನಾವು ಸಹಿಸಿಕೊಳ್ಬೇಕ? ಅನೇಕ ಬಾರಿ ಸಹಿಸಿಕೊಂಡಿದ್ದೇವೆ, ಕಾವೇರಿ ವಿವಾದ ಸುಮಾರು ನೂರು ವರ್ಷಗಳ ಹಿಂದಿನದು. ಅವತ್ತಿಂದಲೂ ನಮಗೆ ಅನ್ಯಾಯ ಆಗುತ್ತಲೇ ಬಂದಿದೆ. 1892 ರ ಒಪ್ಪಂದ, 1924 ರ ಒಪ್ಪಂದ ಹೀಗೆ ಹಲವಾರು ಬಾರಿ ನಮಗೆ ಅನ್ಯಾಯ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಪಾಲಿನ ಹೆಚ್ಚುವರಿ ನೀರನ್ನು ನಾವು ಬಳಕೆ ಮಾಡಿಕೊಳ್ಳಲು ತಮಿಳುನಾಡಿನ ಸರ್ಕಾರ ತಕರಾರು ಮಾಡುತ್ತಿದೆ. ಅಲ್ಲಿನ ಎಲ್ಲಾ ಪಕ್ಷಗಳು ರಾಜಕೀಯ ಕಾರಣಕ್ಕೆ ವಿರೋಧ ಮಾಡ್ತೀವಿ, ನಾವು ನಮ್ಮ ನೆಲ, ಜಲ, ಭಾಷೆ, ಗಡಿಗೆ ಸಂಬಂಧಿಸಿದಂತೆ ರಾಜಕಾರಣ ಮಾಡಿಲ್ಲ, ಮುಂದೆಯೂ ಮಾಡಲ್ಲ. ಮೊನ್ನೆ ಮುಖ್ಯಮಂತ್ರಿಗಳು ಸರ್ವಪಕ್ಷಗಳ ಸಭೆ ಕರೆದಿದ್ದರು, ಅಲ್ಲಿ ನಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದ್ದೇವೆ. ನಮಗೆ ರಾಜಕೀಯಕ್ಕಿಂತ ನಾಡಿನ ಜನರ ಹಿತ ಮುಖ್ಯ. ಆದ್ದರಿಂದ ತಮಿಳುನಾಡಿನ ನಿರ್ಣಯವನ್ನು ಖಂಡಿಸಿ ನಾವು ಕೂಡ ಖಂಡನಾ ನಿರ್ಣಯವನ್ನು ಮಾಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡೋಣ. ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋಗಿ ಪ್ರಧಾನಿಗಳು ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವರ ಮುಂದೆ ವಸ್ತುಸ್ಥಿತಿಯನ್ನು ಹೇಳೋಣ, ಅವರಿಗೂ ಇದು ತಿಳಿದಿರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಒಕ್ಕೂಟ ಧರ್ಮ ಪಾಲನೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ. ರಾಜ್ಯ ಅಭಿವೃದ್ಧಿ ಆದರೆ ಮಾತ್ರ ದೇಶ ಅಭಿವೃದ್ಧಿ ಆಗಲು ಸಾಧ್ಯ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಕಾಣಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಕೇಂದ್ರ ಸರ್ಕಾರ ಈ ಕೂಡಲೇ ಪರಿಸರ ಅನುಮತಿ ಕೊಡಬೇಕು ಮತ್ತು ನಮ್ಮ ವಿಸ್ತೃತ ಯೋಜನಾ ವರದಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಂಗೀಕರಿಸಬೇಕು ಎಂದು ಈ ಸದನದ ಮೂಲಕ ಒತ್ತಾಯ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

Join Whatsapp
Exit mobile version