ಮೈಸೂರು: ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ವತಿಯಿಂದ ಮಾರ್ಚ್ 21 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನನಲ್ಲಿ ಬೃಹತ್ ಬೆಂಗಳೂರು ಚಲೋ ಮತ್ತು ಪರ್ಯಾಯ ಜನಾಧಿವೇಶನ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ, ಎಪಿಎಂಸಿ ತಿದ್ದುಪಡಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಹಾಗೂ ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳನ್ನು ಹಿಂಪಡೆಯುವಂತೆ ಸಂಯುಕ್ತ ಕರ್ನಾಟಕ ಹೋರಾಟ ಸಮಿತಿ ನಿರಂತರ ಹೋರಾಟ ಮಾಡುತ್ತಿದ್ದು, ರಾಜ್ಯ ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆಯದೆ ರೈತರ ಬದುಕನ್ನು ನಾಶ ಮಾಡುತ್ತಿದೆ ಎಂದು ಆಕ್ರೋಶಗೊಂಡರು.
ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ವತಿಯಿಂದ ಈಗಾಗಲೇ ರಾಜ್ಯದ ವಿವಿಧ ಭಾಗಗಳಿಂದ ಜನಾಂದೋಲನ ಮಹಾಮೈತ್ರಿ ಯಾತ್ರೆ ಆರಂಭವಾಗಿದ್ದು ವಿವಿಧ ನಗರ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಬೆಂಗಳೂರಿನಲ್ಲಿ ಕೊನೆಗೊಳ್ಳಲಿದೆ. ಮಾರ್ಚ್ 21 ರಂದು ಬೃಹತ್ ಸಮಾವೇಶ ಮತ್ತು ಮಾರ್ಚ್ 22 ,23 ರಂದು ಪರ್ಯಾಯ ಜನಾಧಿವೇಶನ ನಡೆಸಲಾಗುವುದು. ಈ ಸಮಾವೇಶಕ್ಕೆ ರಾಜ್ಯದ ವಿವಿಧ ಭಾಗಗಳಿಂದ 20 ಸಾವಿರಕ್ಕೂ ಹೆಚ್ಚು ರೈತ,ದಲಿತ, ಕಾರ್ಮಿಕ, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.