February 26, 2021
ಮಸಿ ಬಳಿದ ಪ್ರಕರಣ | ಮೀರಾ ರಾಘವೇಂದ್ರ ಅಮಾನತಿಗೆ ಬಾರ್ ಕೌನ್ಸಿಲ್ ಶಿಫಾರಸು

ಬೆಂಗಳೂರು: ಪ್ರೊ. ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ಮೀರಾ ರಾಘವೇಂದ್ರಗೆ ಬಾರ್ ಕೌನ್ಸಿಲ್ ಉಪಸಮಿತಿಯು ವಕೀಲಿಕೆಯಿಂದ ಅಮಾನತು ಮಾಡುವಂತೆ ಶಿಫಾರಸು ಮಾಡಿದೆ.
ಪ್ರೊ.ಭಗವಾನ್ ಅವರು ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದ ವಕೀಲೆ ಮೀರಾ, ದೂರು ದಾಖಲಿಸಿದ್ದರು. ಈ ಕೇಸ್ನ ಸಂಬಂಧ ಫೆ.4ರಂದು ವಿಚಾರಣೆ ನಡೆಸಿದ ಬೆಂಗಳೂರಿನ 2 ನೇ ಎಸಿಎಂಎಂ ನ್ಯಾಯಾಲಯ, ಜಾಮೀನು ನೀಡಿತ್ತು. ಕೋರ್ಟ್ನಿಂದ ಭಗವಾನ್ ಅವರು ಹೊರ ಬರುತ್ತಿದ್ದಂತೆ ಸಿಟ್ಟಿಗೆದ್ದ ಮೀರಾ, ‘ಇಷ್ಟು ವಯಸ್ಸು ಆಗಿದೆ. ಇನ್ನು ನಾಚಿಕೆಯಾಗಲ್ವಾ? ರಾಮನ ಬಗ್ಗೆ, ಹಿಂದು ಧರ್ಮದ ಬಗ್ಗೆ ಮಾತಾನಾಡ್ತೀರಾ?’ ಎಂದು ಮಸಿ ಬಳಿದು ಆಕ್ರೋಶ ಹೊರಹಾಕಿದ್ದರು. ತನ್ನ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಪ್ರೊ. ಭಗವಾನ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.
ಇನ್ನು ಒಬ್ಬ ವಕೀಲೆ ಆಗಿ ಕೋರ್ಟ್ ಆವರಣದಲ್ಲಿ ದುರ್ನಡತೆ ತೋರಿದ ಆರೋಪ ಮೀರಾ ಮೇಲಿದೆ. ಈ ಸಂಬಂಧ ಕರ್ನಾಟಕ ಬಾರ್ ಕೌನ್ಸಿಲ್ಗೆ ವಿಚಾರಣಾ ವರದಿ ಸಲ್ಲಿಕೆಯಾಗಿದ್ದು, ಶಿಸ್ತು ವಿಚಾರಣೆ ಮುಗಿಯುವವರೆಗೂ ಮೀರಾ ವಕೀಲಿಕೆಯ ಸನ್ನದು ಅಮಾನತು ಪಡಿಸುವಂತೆ ಬಾರ್ ಕೌನ್ಸಿಲ್ ಉಪಸಮಿತಿ ಶಿಫಾರಸು ಮಾಡಿದೆ.