Home ಟಾಪ್ ಸುದ್ದಿಗಳು ರದ್ದಾಗಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಮುಂದುವರಿಸಲು ಮಧ್ಯಸ್ಥಿಕೆ ವಹಿಸಿ: ರಾಷ್ಟ್ರಪತಿಗೆ ವೆಲ್ಫೇರ್ ಪಾರ್ಟಿ ಮನವಿ

ರದ್ದಾಗಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಮುಂದುವರಿಸಲು ಮಧ್ಯಸ್ಥಿಕೆ ವಹಿಸಿ: ರಾಷ್ಟ್ರಪತಿಗೆ ವೆಲ್ಫೇರ್ ಪಾರ್ಟಿ ಮನವಿ

ಬೆಂಗಳೂರು: ರದ್ದಾಗಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಮುಂದುವರಿಸಲು ಮಧ್ಯಸ್ಥಿಕೆ ವಹಿಸಲು ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮನವಿ ಮಾಡಿದೆ.


ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್’ನ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಯಲ್ಲಿ ಬರುವ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಕೊಡಮಾಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಈ ವರ್ಷದಿಂದ ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡ ಕೇಂದ್ರ ಸರ್ಕಾರದ ನಡೆಯ ಬಗ್ಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ವಿಷಾದ ವ್ಯಕ್ತಪಡಿಸಿದೆ.
1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳು ಆರ್’ಟಿಇ ಅಡಿಯಲ್ಲಿ ಬರುವ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುತ್ತಿದ್ದು, ಅವರಿಗೆ ಸ್ಕಾಲರ್ಶಿಪ್’ನ ಅಗತ್ಯವಿರುವುದಿಲ್ಲ, ಹಾಗಾಗಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಇದು ಆರ್’ಟಿಇ ಕಾಯ್ದೆಯ ತಪ್ಪು ವ್ಯಾಖ್ಯಾನವಾಗಿದೆ. ಮೂಲಭೂತ ಹಕ್ಕಾದ ಆರ್’ಟಿಇ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗುವ ಸ್ಕಾಲರ್’ಶಿಪ್ ಅನ್ನು ಹೆಚ್ಚುವರಿ ಸವಲತ್ತು ಎಂಬಂತೆ ಬಿಂಬಿಸುವುದು ತಪ್ಪಾಗುತ್ತದೆ, ಮಕ್ಕಳ ಶಾಲಾ ದಾಖಲಾತಿಯನ್ನು ಖಚಿತಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಅದರ ಭಾಗವಾಗಿ ಸ್ಕಾಲರ್ಶಿಪ್ ಅನ್ನು ಜಾರಿಗೆ ತರಲಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ಮನವರಿಕೆ ಮಾಡಿಕೊಳ್ಳಬೇಕಾಗಿದೆ ಎಂದು ಪಕ್ಷ ಮನವಿ ಪತ್ರದಲ್ಲಿ ತಿಳಿಸಿದೆ.


ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿವೇತನವು 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದಿಂದ ದೂರ ಉಳಿಯಬಾರದು ಎಂಬ ಆಶಯವನ್ನು ಹೊಂದಿದೆ. ಅದಕ್ಕಾಗಿ ಸ್ಕಾಲರ್’ಶಿಪ್ ಅನ್ನು ನೀಡಲಾಗುತ್ತಿದೆ ಎಂಬುದನ್ನು ಸರ್ಕಾರ ಮರೆತಿರುವುದು ದುರಂತ. ಮಕ್ಕಳ ಶಾಲಾ ದಾಖಲಾತಿಯನ್ನು ಖಚಿತಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ, ಕೇಂದ್ರದ ಈ ಸುತ್ತೋಲೆಯು ಸಂವಿಧಾನದ ಮೂಲಭೂತ ಹಕ್ಕಾದ ಶಿಕ್ಷಣದ ಹಕ್ಕನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.


ರಾಜ್ಯ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಹಿನ್ನೆಲೆಯುಳ್ಳ ಮಕ್ಕಳು ಶಾಲೆಯಿಂದ ಹೊರಗುಳಿದ ಬಗ್ಗೆ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ನೇಮಿಸಿದ್ದ ಸಮಿತಿಯು ಬಹಿರಂಗಪಡಿಸಿದ್ದ ವರದಿಯು ಅತ್ಯಂತ ಕಳವಳಕಾರಿ ಸಂಗತಿಯಾಗಿತ್ತು. ಇದೀಗ ಆ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ಸಾಧ್ಯವಾಗುವ ಎಲ್ಲ ರೀತಿಯ ಸೌಲಭ್ಯ ಮತ್ತು ಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿ‌ಸಬೇಕಾದ ಹೊತ್ತಲ್ಲಿ, ಕೇಂದ್ರದ ಇಂತಹ ಶಿಕ್ಷಣ ವಿರೋಧಿ ನಡೆಯು ದೇಶದ ಸಾಕ್ಷರತಾ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ.


ಆದ್ದರಿಂದ ಗೌರವಾನ್ವಿತ ರಾಷ್ಟ್ರಪತಿಗಳು, ಮಧ್ಯಸ್ಥಿಕೆ ವಹಿಸಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆಗುತ್ತಿರುವ ಈ ಅನ್ಯಾಯವನ್ನು ತಡೆಯಬೇಕೆಂದು ಈ ಮೂಲಕ ತಮ್ಮಲ್ಲಿ ಗೌರವಪೂರ್ವಕವಾಗಿ ಆಗ್ರಹಿಸುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.


ಈ ಸಂದರ್ಭದಲ್ಲಿ ಮುಖಂಡರಾದ ಸಫೀರ್ ಆಸಿಫ್, ಫಜಲ್ ಅಹಮದ್, ಸೈಯದ್ ಇಲಿಯಾಸ್, ಅಬ್ಬಾಸ್ ಖಾನ್ ಇದ್ದರು.

Join Whatsapp
Exit mobile version