ಹೊಸದಿಲ್ಲಿ: ಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿಯಿರುವ ವಿಷಯಗಳ ಮೇಲೆ ಟಿ.ವಿ ಮತ್ತು ಮುದ್ರಣಾ ಮಾಧ್ಯಮಗಳು ನಡೆಸುವ ಚರ್ಚೆ ನ್ಯಾಯಾಧೀಶರುಗಳ ಆಲೋಚನೆಯ ಮೇಲೆ ಪ್ರಭಾವ ಬೀರುತ್ತದೆ ಮತ್ತು ನ್ಯಾಯಾಂಗದ ಮೇಲೆ ತೀವ್ರ ಹಾನಿಯನ್ನುಂಟುಮಾಡುತ್ತದೆ ಎಂದು ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವಲೋಕಿಸಿದ್ದಾರೆ.
“ಜಾಮೀನು ಅರ್ಜಿಯು ವಿಚಾರಣೆಗಾಗಿ ಬರುವ ವೇಳೆಗೆ ಆರೋಪಿ ಮತ್ತು ಇನ್ನೊಬ್ಬರ ನಡುವಿನ ಸಂಭಾಷಣೆಗಳನ್ನು ದೂರದರ್ಶನವು ಪ್ರಸಾರಪಡಿಸುತ್ತದೆ. ಆ ವಿಚಾರವು ಜಾಮೀನು ವಿಚಾರಣೆಯ ಬರುತ್ತದೆ ಮತ್ತು ಆರೋಪಿಗೆ ಹಾನಿಯುಂಟುಮಾಡುತ್ತದೆ” ಎಂದು ವೇಣುಗೋಪಾಲ್ ರವರು ನ್ಯಾ.ಎ.ಎಂ.ಖನ್ವಿಲ್ಕರ್, ಬಿ.ಆರ್ ಗವಾಯ್ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠದ ಮುಂದೆ ಹೇಳಿದ್ದಾರೆ. ಇದು ನ್ಯಾಯಾಂಗ ನಿಂದನೆಯಾಗಿದೆ ಎಂದು ಅವರು ಹೇಳಿದ್ದಾರೆ.
2009ರಲ್ಲಿ ಭಾರತದ ಮೂವರು ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಮಾನವ ಹಕ್ಕು ಹೋರಾಟಗಾರ ನ್ಯಾಯವಾದಿ ಪ್ರಶಾಂತ್ ಭೂಷಣ್ ರ ವಿವಾದಾಸ್ಪದ ಹೇಳಿಕೆಯು ನ್ಯಾಯಾಂಗ ನಿಂದನೆಯಾಗುತ್ತದೆಯೇ ಎಂಬ ಕುರಿತು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ವೇಣುಗೋಪಾಲ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತೆಹಲ್ಕಾ ಮ್ಯಾಗಝಿನ್ ಗೆ ನೀಡಿದ ಸಂದರ್ಶನದಲ್ಲಿ ಭೂಷಣ್ ಈ ಹೇಳಿಕೆಗಳನ್ನು ನೀಡಿದ್ದರು.
ನ್ಯಾಯಾಲಯವು ಆ.10ರಂದು ಅವರ ‘ಪಶ್ಚಾತ್ತಾಪ’ವನ್ನು ಒಪ್ಪಿಕೊಳ್ಳಲು ನಿರಾಕರಿಸಿತ್ತು ಮತ್ತು ಈ ಕುರಿತು ವಿವರಣೆಯನ್ನು ಕೇಳಿತ್ತು. ಭೂಷಣ್ ಹೇಳಿಕೆಯು ನ್ಯಾಯಾಂಗ ನಿಂದನೆಯೇ ಎಂಬುದನ್ನು ತಾನು ಸ್ವತ: ಪರಿಶೀಲಿಸುವುದಾಗಿ ಹೇಳಿತ್ತು. ನ್ಯಾಯಾಧೀಶರ ವಿರುದ್ಧ ಆಕ್ಷೇಪವನ್ನು ವ್ಯಕ್ತಪಡಿಸುವ ಕಾರ್ಯವಿಧಾನ ಮತ್ತು ಯಾವ ಸಂದರ್ಭದಲ್ಲಿ ವ್ಯಕ್ತಪಡಿಸಬಹುದು ಎಂಬ ಕುರಿತು ಪೀಠವು ಪರಿಶೀಲಿಸುತ್ತಿದೆ. ವಿಚಾರಣೆಯಲ್ಲಿರುವ ಯಾವ ವಿಷಯವನ್ನು ಮಾಧ್ಯಮದಲ್ಲಿ ಚರ್ಚಿಸಬಹುದು ಎಂಬ ಕುರಿತೂ ಅದು ಪರಿಶೀಲಿಸುತ್ತಿದೆ. ಈ ವಿಷಯಗಳ ಮೇಲೆ ಸುಪ್ರೀಂ ಕೋರ್ಟ್ ವೇಣುಗೋಪಾಲ್ ರ ನೆರವನ್ನು ಕೇಳಿದೆ. ಪೀಠವು ಮುಂದಕ್ಕೆ ಪ್ರಕರಣವನ್ನು ನವೆಂಬರ್ 4ರಂದು ವಿಚಾರಣೆಗೆ ಎತ್ತಿಕೊಳ್ಳಲಿದೆ.