ನವದೆಹಲಿ: ಹಿಂದೂಗಳ ಹಬ್ಬವಾದ ನವರಾತ್ರಿಯ ವೇಳೆ ದೆಹಲಿಯ ವಿವಿದೆಡೆ ಮಾಂಸದ ಅಂಗಡಿಗಳ ಮೇಲಿನ ನಿಷೇಧವನ್ನು ತೃಣಮೂಲ ಕಾಂಗ್ರೆಸ್ ಟೀಕಿಸಿದ್ದು, ಸಂವಿಧಾನವು ಭಾರತೀಯರಿಗೆ ತನಗಿಷ್ಟದ ಮಾಂಸ, ಆಹಾರವನ್ನು ಸೇವಿಸಲು ಮತ್ತು ಮಾರಾಟ ಮಾಡಲು ಮುಕ್ತ ಅವಕಾಶ ಖಾತ್ರಿಪಡಿಸಿದೆ ಎಂದು ಸಂಸದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅವರು, ‘ನಾನು ದಕ್ಷಿಣ ದೆಹಲಿಯಲ್ಲಿ ವಾಸಿಸುತ್ತಿದ್ದೇನೆ. ಸಂವಿಧಾನವು ನನಗೆ ಇಷ್ಟವಾದಾಗ ಮಾಂಸವನ್ನು ತಿನ್ನಲು ಅವಕಾಶ ನೀಡುತ್ತದೆ ಮತ್ತು ಅಂಗಡಿಯವನು ತನ್ನ ವ್ಯಾಪಾರವನ್ನು ನಡೆಸುವ ಸ್ವಾತಂತ್ರ್ಯವನ್ನು ನೀಡುತ್ತದೆ’ ಎಂದು ತಿಳಿಸಿದ್ದಾರೆ.
ನವರಾತ್ರಿಯ ವೇಳೆ ಭಕ್ತರು ಮಾಂಸ, ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದನ್ನು ನಿಲ್ಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ದೆಹಲಿ ಪಾಲಿಕೆಯ ವ್ಯಾಪ್ತಿಯಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ದಕ್ಷಿಣ ದೆಹಲಿಯ ಮೇಯರ್ ಮುಖೇಶ್ ಸೂರ್ಯನ್ ಅವರು ಆದೇಶ ಹೊರಡಿಸಿದ್ದರು.
ಈ ಮಧ್ಯೆ ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲವೆಂದು ಪಾಲಿಕೆಯ ಆಯುಕ್ತರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಆದೇಶದ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಕ್ರಮ ಜರುಗಿಸುವ ಭಯದಿಂದ ರಾಜಧಾನಿಯ ಹಲವೆಡೆ ಹಲವಾರು ಮಾಂಸದ ಅಂಗಡಿ ಮಾಲಕರು ತಮ್ಮ ಸಂಸ್ಥೆಗಳನ್ನು ಮುಚ್ಚಿದ್ದಾರೆ ಎಂದು ಹೇಳಲಾಗಿದೆ.
ದಕ್ಷಿಣ ದೆಹಲಿ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1500 ನೋಂದಾಯಿತ ಮಾಂಸದ ಅಂಗಡಿಗಳು ಕಾರ್ಯಾಚರಿಸುತ್ತಿವೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.