Home ಟಾಪ್ ಸುದ್ದಿಗಳು ಖಾಸಗಿ ಕಾಲೇಜುಗಳಿಗಿಂತ ಸರ್ಕಾರಿ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳು ಹೆಚ್ಚು: ಕೇಂದ್ರ ಸರ್ಕಾರ

ಖಾಸಗಿ ಕಾಲೇಜುಗಳಿಗಿಂತ ಸರ್ಕಾರಿ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟುಗಳು ಹೆಚ್ಚು: ಕೇಂದ್ರ ಸರ್ಕಾರ

ಹೊಸದಿಲ್ಲಿ:  ಖಾಸಗಿ ಕಾಲೇಜುಗಳಿಗಿಂತ ಹೆಚ್ಚು ಎಂಬಿಬಿಎಸ್‌ ಸೀಟುಗಳು  ಸರ್ಕಾರಿ ಕಾಲೇಜುಗಳಲ್ಲಿ ಲಭ್ಯ ಇವೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಇದು ವೈದ್ಯಕೀಯ ಶಿಕ್ಷಣವು ಎಲ್ಲರ ಕೈಗೆಟುಕುವ ಭರವಸೆಯನ್ನು ಹುಟ್ಟುಹಾಕಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ ಲೋಕಸಭೆಗೆ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕದಲ್ಲಿ 550 ಸೀಟುಗಳೂ ಸೇರಿದಂತೆ 16 ರಾಜ್ಯಗಳ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ ಒಟ್ಟು 3,945 ಸೀಟುಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಮಾಂಡವೀಯ ಹೇಳಿದ್ದಾರೆ.

2019–20 ಹಾಗೂ 2021–2022ರಲ್ಲಿಯೂ ಇದೇ ಪ್ರವೃತ್ತಿ ಚಾಲ್ತಿಯಲ್ಲಿತ್ತು. ಇದು  ಸಮಾಜದ ಹೆಚ್ಚಿನ ವರ್ಗಕ್ಕೆ ವೈದ್ಯಕೀಯ ಶಿಕ್ಷಣವು ಕೈಗೆಟುಕುವಂತಾಗಿದ್ದು,  ಇದರಿಂದಾಗಿ ಕೆಲವು ಎಂಬಿಬಿಎಸ್‌ ಪದವೀಧರರು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ನಿರ್ಧರಿಸಬಹುದು ಎಂದು ‘ಅಬ್ಸರ್ವರ್‌ ರೀಸರ್ಚ್‌ ಫೌಂಡೇಷನ್‌’ನಲ್ಲಿರುವ ಆರೋಗ್ಯ ಸಮಸ್ಯೆಗಳ ಕುರಿತ ಹಿರಿಯ ಸಂಶೋಧಕ ಉಮ್ಮನ್ ಕುರಿಯನ್ ಹೇಳಿದ್ದಾರೆ.

‘ಉತ್ತಮ ಮೂಲ ಸೌಕರ್ಯ ಹಾಗೂ ಸಾರ್ವಜನಿಕ ವಲಯದಲ್ಲಿನ ಹೆಚ್ಚಿನ ಸೀಟುಗಳು ದೊರೆಯುವುದು, ಸದ್ಯ ಸಣ್ಣ ಮತ್ತು ದೊಡ್ಡ ನಗರಗಳಲ್ಲಿ ಅಥವಾ ಹಳ್ಳಿಗಳಲ್ಲಿ ಲಭ್ಯವಿರುವ ವೈದ್ಯರ ನಡುವೆ ಇರುವ ಅಂತರವನ್ನು ತೊಡೆದುಹಾಕಲು ಸಹಕಾರಿಯಾಗಬಲ್ಲದು’ ಎಂದು ಕುರಿಯನ್ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಕಾಲೇಜುಗಳಲ್ಲಿ 43,915 ಮತ್ತು ಸರ್ಕಾರಿ ಕಾಲೇಜುಗಳಲ್ಲಿ 48,212 ಸೀಟುಗಳು ಸೇರಿ 2022–23ರ ಅವಧಿಯಲ್ಲಿ ದೇಶದಲ್ಲಿ ಒಟ್ಟು 91,927 ಎಂಬಿಬಿಎಸ್‌ ಸೀಟುಗಳು ಲಭ್ಯವಿದೆ.

ಸೀಟುಗಳ ಹೆಚ್ಚಳಕ್ಕೆ ಯೋಜನೆ ಕೈಗೊಳ್ಳಲಾಗಿದೆಯಾದರೂ ಕರ್ನಾಟಕದ ಸರ್ಕಾರಿ ಕಾಲೇಜುಗಳಲ್ಲಿ ಲಭ್ಯವಿರುವ ಎಂಬಿಬಿಎಸ್‌ ಸೀಟುಗಳ ಪ್ರಮಾಣ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಶೇ 50ಕ್ಕಿಂತಲೂ ಕಡಿಮೆ ಇದೆ. ಸದ್ಯ ಕರ್ನಾಟಕದಲ್ಲಿ 10,145 ಎಂಬಿಬಿಎಸ್‌ ಸೀಟುಗಳಿದ್ದು,  ಈ ಪೈಕಿ 6,995 ಸೀಟುಗಳು ಖಾಸಗಿ ಕಾಲೇಜುಗಳಲ್ಲಿ ಮತ್ತು 3,150 ಸರ್ಕಾರಿ ಕಾಲೇಜುಗಳಲ್ಲಿ ಲಭ್ಯವಿವೆ.

Join Whatsapp
Exit mobile version