ಎಸ್ಪಿ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿ ಬೆಂಬಲಿಸಲೂ ಸಿದ್ಧ : ಮಾಯಾವತಿ
Prasthutha: October 29, 2020

ಲಖನೌ : ಉತ್ತರ ಪ್ರದೇಶ ವಿಧಾಸಭಾ ಮೇಲ್ಮನೆ ಮತ್ತು ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ತಾನು ಬಿಜೆಪಿ ಸೇರಿದಂತೆ ಯಾವುದೇ ಪಕ್ಷವನ್ನು ಬೆಂಬಲಿಸಲ ಸಿದ್ಧರಿರುವುದಾಗಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.
ತಮ್ಮ ಪಕ್ಷದ ಕೆಲವು ಶಾಸಕರು ಸಮಾಜವಾದಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯ ನಡುವೆ ಮಾಯಾವತಿ ಅವರ ಈ ಹೇಳಿಕೆ ಹೊರಬಿದ್ದಿದೆ. ಕಳೆದ ವರ್ಷದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ತಮ್ಮ ಪಕ್ಷ ಮೈತ್ರಿಕೊಂಡಿರುವುದು ಮತ್ತು ಎಸ್ ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ತಂದೆ ಮುಲಾಯಂ ಸಿಂಗ್ ಯಾದವ್ ವಿರುದ್ಧದ 1995ರ ಪ್ರಕರಣ ಹಿಂಪಡೆಯುವ ನಿರ್ಧಾರ ತಪ್ಪಾಗಿತ್ತು ಎಂದು ಮಾಯಾವತಿ ಹೇಳಿದ್ದಾರೆ.
ಬಿಎಸ್ ಪಿಯ ಆರು ಶಾಸಕರು ಅಖಿಲೇಶ್ ರನ್ನು ಬುಧವಾರ ಭೇಟಿಯಾಗಿದ್ದರು. ಪಕ್ಷದ ರಾಜ್ಯಸಭಾ ಅಭ್ಯರ್ಥಿ ರಾಮ್ ಜೀ ಗೌತಮ್ ರ ನಾಮಪತ್ರದಲ್ಲಿ ತಮ್ಮ ಸಹಿ ನಕಲಿ ಮಾಡಲಾಗಿದೆ ಎಂದು ಅವರಲ್ಲಿ ನಾಲ್ವರು ಶಾಸಕರು ಹೇಳಿದ್ದಾರೆ. ಗೌತಮ್ ರ ನಾಮನಿರ್ದೇಶನವನ್ನು ವಿರೋಧಿಸಿರುವ ಏಳು ಮಂದಿ ಬಂಡಾಯ ಶಾಸಕರನ್ನು ಮಾಯಾವತಿ ಗುರುವಾರ ಅಮಾನತುಗೊಳಿಸಿದ್ದಾರೆ.
ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ನ.9ರಂದು ಚುನಾವಣೆ ನಡೆಯಲಿದೆ. ಜನವರಿಯಲ್ಲಿ 11 ವಿಧಾನಪರಿಷತ್ ಸ್ಥಾನಗಳು ತೆರವಾಗಲಿವೆ.
