ಬೆಂಗಳೂರು: ಮುಖ್ಯಮಂತ್ರಿಗಳು ತಾವು ಹೇಳಿದ ಹೇಳಿಕೆಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಕ್ರಿಯೆಗೆ ಪ್ರತಿಕ್ರಿಯೆ ಕೊಡುವುದು ವಿನಾಶಕ್ಕೆ ಕರೆದೊಯ್ಯುತ್ತದೆ. ಬಸವಣ್ಣನನ್ನೇ ಮರೆತ ಬೊಮ್ಮಾಯಿ, ಸಾಂವಿಧಾನಿಕ ಮೌಲ್ಯಗಳನ್ನು ಮರೆತ ಮುಖ್ಯಮಂತ್ರಿ. ಜಾತಿ ಧರ್ಮದ ಹೆಸರಿನಲ್ಲಿ ಕಗ್ಗೊಲೆ ಸಾಕು ಎಂಬ ಘೋಷಣೆಗಳ ಮೂಲಕ ನೂರಾರು ಪ್ರತಿಭಟನಕಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದರು.
ಇಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ನೂರಾರು ಪ್ರತಿಭಟನಕಾರರು ಮತೀಯ ಗೂಂಡಾಗಿರಿ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷಮೆಯಾಚಿಸಬೇಕೆಂದು ವಿವಿಧ ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಧರಣಿ ನಡೆಸಿದರು.
“ಮಾರ್ಗರೇಟ್ ರಾಮಾಚಾರಿ ಸುಖವಾಗಿ ಬಾಳಲು ಆಗಿಲ್ಲ – ಇನ್ನು ಮುಂದು ಪ್ರೀತಿಗೆ ಯಾರು ಅಡ್ಡ ಬರಬಾರದು, ಸರ್ಕಾರ ಕೂಡ! ಸರ್ವ ಜನಾಂಗದ ಶಾಂತಿಯ ತೋಟವನ್ನು ಉಳಿಸಿಕೊಳ್ಳೋಣ ಬನ್ನಿ. ದ್ವೇಷ ಸಾಕು, ಪ್ರೀತಿ ಬೇಕು. ಮುಖ್ಯಮಂತ್ರಿಗಳೇ, ತಮ್ಮ ಬದ್ಧತೆ ಸಂವಿಧಾನದ ಮೌಲ್ಯಗಳಿಗಿರಲಿ”ಎಂಬ ಘೋಷಣೆಗಳು ಮೊಳಗಿದವು.
ಸರ್ವೋಚ್ಛ ನ್ಯಾಯಾಲಯವು ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ವಿವಾಹಗಳನ್ನು ರಕ್ಷಿಸಲು ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು ಮತ್ತು ಅಂತಹ ವಿವಾಹಿತ ವ್ಯಕ್ತಿಗಳ ವಿರುದ್ಧ ನಡೆಯುವ ಹಿಂಸೆ, ಮರ್ಯಾದಾ ಹತ್ಯೆಗಳು ಮತ್ತು ಗೂಂಡಾಗಿರಿ ವಿರುದ್ಧ ತೆಗೆದುಕೊಳ್ಳುವ ಕಾನೂನು ಕ್ರಮಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುವಾಗ ಸಂವಿಧಾನದ ಮೇಲೆ ಪ್ರಮಾಣ ಮಾಡಿದರು. ನನ್ನ ಬದ್ಧತೆ ಸಂವಿಧಾನಕ್ಕೆ, ಈ ನಾಡಿನಲ್ಲಿ ಯಾವುದೇ ಒಂದು ವರ್ಗಕ್ಕೆ ಒಲವು ತೋರಿಸದೆ ಎಲ್ಲ ವರ್ಗಕ್ಕೂ ನ್ಯಾಯ ಸಿಗುವಂತೆ ಆಡಳಿತ ನಡೆಸುತ್ತೇನೆ, ಸಂವಿಧಾನದ ಮೌಲ್ಯಗಳಿಗೆ ತಕ್ಕಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ ಅವರೇ ಸಂವಿಧಾನಕ್ಕೆ ಸಂಪೂರ್ಣ ವಿರುದ್ಧವಾದಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಜಾತಿ ವಿನಾಶಕ್ಕೆ ಅಂತರ್ಜಾತಿ ವಿವಾಹ ಅಗತ್ಯ ಎಂದಿದ್ದರು. ಆದರೆ ಇಂದು ಅಂತರ್ಜಾತಿ ಮದುವೆಗೆ ಕಲ್ಲು ಹಾಕುತ್ತಿದ್ದಾರೆ. ಜನರ ನಡುವೆ ಜಾತಿ ಧರ್ಮದ ಗೋಡೆ ಕಟ್ಟುತ್ತಿದ್ದಾರೆ. ಮಹಿಳೆಯರ ಮೇಲೆ ದಾಳಿ ಅವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಮಹಿಳೆಯರು ಯಾರೊಂದಿಗೆ ಸ್ನೇಹ ಮಾಡಬೇಕು, ಯಾರೊಂದಿಗೆ ಮದುವೆಯಾಗಬೇಕು ಎಂಬುದನ್ನು ನಿಯಂತ್ರಿಸುತ್ತಿದ್ದಾರೆ. ಏಕೆ ಮಹಿಳೆಯರಿಗೆ ಜ್ಞಾನವಿಲ್ಲವೇ? ಸ್ವಾತಂತ್ರ್ಯವಿಲ್ಲವೇ? ಮಹಿಳೆಯರು ಏನು ಮಾಡಬೇಕೆಂದು ತೀರ್ಮಾನಿಸಲು ಇವರು ಯಾರು ಎಂದು ಕಿಡಿಕಾರಿದರು.
ಹಿಂದುತ್ವ ಸಂಘಟನೆಗಳ ಮತೀಯ ಗೂಂಡಾಗಿರಿಯಿಂದ ರಾಜ್ಯದಲ್ಲಿ ಕೋಮು ಸೌಹಾರ್ದತೆ ಹದಗೆಟ್ಟಿದೆ. ಈ ಮತೀಯ ಸಂಘಟನೆಗಳ ಕ್ರೌರ್ಯದಿಂದ ಸಮಾಜದಲ್ಲಿ ಮಹಿಳೆಯರನ್ನು, ದಲಿತರನ್ನು, ಅಲ್ಪಸಂಖ್ಯಾತರನ್ನು ಇನ್ನಷ್ಟು ಪ್ರತ್ಯೇಕಿಸಿ ಮೂಲೆಗುಂಪು ಮಾಡಲಾಗುತ್ತಿದೆ. ಇದು ಭ್ರಾತೃತ್ವ ಮತ್ತು ಜಾತ್ಯತೀತತೆಯ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಜಾತ್ಯತೀತತೆ ಧಕ್ಕೆಯನ್ನುಂಟು ಮಾಡುವ ಸಂಘಟನೆಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಹಿಂದುತ್ವ ಗುಂಪುಗಳ ಗೂಂಡಾಗಿರಿಯಿಂದ ದಲಿತರು, ಆದಿವಾಸಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಮಹಿಳೆಯರು ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಂತ್ವನ ಹೇಳದ ಆಳುವ ಸರ್ಕಾರದ ಪ್ರತಿನಿಧಿಗಳು ಇವರಿಗೆ ಯಾವುದೇ ಬೆಂಬಲ ನೀಡದಿರುವ ಬಗ್ಗೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ವಿಮಲಾ ಕೆ.ಎಸ್., ಗೌರಮ್ಮ, ದೇವಿ, ಮೈತ್ರೇಯಿ ಕೃಷ್ಣನ್, ವಿನಯ್ ಶ್ರೀನಿವಾಸ್, ಶಬೀರ್, ದಿಲೀಪ್, ರತ್ನಮ್ಮ, ಎನ್.ಆರ್.ಸುಧೀರ್, ಚಂದ್ರಮ್ಮ, ಮಮತಾ ಮತ್ತಿತರರು ನೇತೃತ್ವವನ್ನು ವಹಿಸಿಕೊಂಡಿದ್ದರು.
ಧರಣಿ ನಂತರ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದ ಪ್ರತಿಭಟನಕಾರರು ಮನವಿ ಸಲ್ಲಿಸಿದರು.