Home ರಾಷ್ಟ್ರೀಯ ಮಥುರಾ ಬೃಂದಾವನ ಕಾರಿಡಾರ್ ವಿರೋಧಿಸಿ ಪ್ರತಿಭಟನೆ: ಉತ್ತರ ಪ್ರದೇಶ ಸರ್ಕಾರಕ್ಕೆ ಇಕ್ಕಟ್ಟು

ಮಥುರಾ ಬೃಂದಾವನ ಕಾರಿಡಾರ್ ವಿರೋಧಿಸಿ ಪ್ರತಿಭಟನೆ: ಉತ್ತರ ಪ್ರದೇಶ ಸರ್ಕಾರಕ್ಕೆ ಇಕ್ಕಟ್ಟು

ಮಥುರಾ: ಮಥುರಾಲಯದ ಸುತ್ತ ನಿರ್ಮಿಸಲ ಉದ್ದೇಶಿಸಿರುವ ಕಾರಿಡಾರ್’ಗಾಗಿ ಇಲ್ಲಿನ ಖಾಯಂ ನಿವಾಸಿಗಳ ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಕಾಶಿ ವಿಶ್ವನಾಥ ಮಂದಿರದ ಮಾದರಿಯಲ್ಲೇ ಉತ್ತರ ಪ್ರದೇಶದ ಮಥುರಾದ ಬಂಕೇ ಬಿಹಾರಿ ದೇವಸ್ಥಾನದ ಸುತ್ತ ಕಾರಿಡಾರ್ ನಿರ್ಮಿಸಲು ಯೋಗಿ ಆದಿತ್ಯನಾಥ ಸರಕಾರವು ತೀರ್ಮಾನಿಸಿದ್ದನ್ನು ಸ್ಥಳೀಯರು ತೀವ್ರವಾಗಿ ವಿರೋಧಿಸಿದ್ದಾರೆ. ನಿವಾಸಿಗಳ ಪ್ರತಿಭಟನೆ ಬೆಂಬಲಿಸಿ ವ್ಯಾಪಾರಿಗಳು ಅಂಗಡಿ ಮುಂಗಟ್ಟು ಬಂದ್ ಮಾಡಿದರು. ಅರ್ಚಕರು ಮತ್ತು ವ್ಯಾಪಾರಿಗಳು ಮುಖ್ಯಮಂತ್ರಿಗೆ ರಕ್ತದಲ್ಲಿ ಪತ್ರ ಬರೆಯಲು ತೀರ್ಮಾನಿಸಿದ್ದಾರೆ.

ಎರಡು ದಿನಗಳಿಂದ ಇಲ್ಲಿಯ ಮಾರುಕಟ್ಟೆಯ ಅಂಗಡಿಗಳು ಮುಚ್ಚಿವೆ. ದೇವಾಲಯ ಪೂಜಾರಿಗಳೂ ಪ್ರತಿಭಟನೆ ಬೆಂಬಲಿಸಿ ಬೀದಿಗಿಳಿದಿದ್ದಾರೆ. ವಿಚಾರ ಈಗ ಅಲಹಾಬಾದ್ ಹೈಕೋರ್ಟ್ ತಲುಪಿದೆ; ಈ ತಿಂಗಳಾಂತ್ಯದಲ್ಲಿ ಸುಪ್ರೀಂ ಕೋರ್ಟ್ ಸಹ ಈ ವಿಚಾರವನ್ನು ಕೈಗೆತ್ತಿಕೊಳ್ಳಲಿದೆ.

ದೇವಾಲಯದ ಸುತ್ತ ಸಹ 5 ಎಕರೆ ಜಾಗ ವಶಪಡಿಸಿಕೊಳ್ಳಲು ಯೋಗಿ ಸರಕಾರ ತೀರ್ಮಾನಿಸಿದೆ. ಇಲ್ಲಿ 300ಕ್ಕೂ ಹೆಚ್ಚು ಕಟ್ಟಡಗಳು, ಜನವಸತಿ ಇತ್ಯಾದಿ ಇದ್ದು, ಕಾರಿಡಾರ್ ನಿರ್ಮಾಣಕ್ಕಾಗಿ ಅವನ್ನೆಲ್ಲ ಧ್ವಂಸಗೊಳಿಸಲು ಸರಕಾರ ಆದೇಶ ಹೊರಡಿಸಿದೆ.

ಇಲ್ಲಿ ಸುಮಾರು 300 ದೇವಾಲಯಗಳಿವೆ. ನಾವು ಹಿರಿಯರ ಕಾಲದಿಂದಲೂ ಈ ದೇವಾಲಯಗಳಲ್ಲಿ ಪೂಜೆ ನಡೆಸಿದ್ದೇವೆ. ಉರುಳಿಸುವುದೆಂದರೆ ನಮ್ಮ ನಂಬಿಕೆಯನ್ನೇ ಕೆಡವಿದಂತೆ ಎನ್ನುತ್ತಾರೆ ಸ್ಥಳೀಯರು.

ಉಚ್ಚ ನ್ಯಾಯಾಲಯದ ಆದೇಶದ ಬಳಿಕ ಮಥುರಾ ಜಿಲ್ಲಾ ಮ್ಯಾಜಿಸ್ಟ್ರೇಟರು ಎಂಟು ಜನರ ಸಮಿತಿ ರಚಿಸಿ, 200ಕ್ಕೂ ಹೆಚ್ಚು ಕಟ್ಟಡಗಳ ಸರ್ವೆ ಮಾಡಿ, ಗುರುತು ಮಾಡಿದ್ದಾರೆ.

2022ರ ಡಿಸೆಂಬರ್ 20ರಂದು ಅಲಹಾಬಾದ್ ಹೈಕೋರ್ಟ್ ಸರ್ವೆಗೆ ಆದೇಶ ನೀಡಿತು. ಉತ್ತರ ಪ್ರದೇಶ ಸರಕಾರವು ಆ ಸರ್ವೆ ವರದಿಯನ್ನು ಕೋರ್ಟಿನೆದುರು ಇಡಬೇಕಾಗಿದೆ.

ಮಥುರಾ ನಗರದಿಂದ 20 ಕಿಮೀ ದೂರದ ವೃಂದಾವನದ ಬಂಕೇ ಬಿಹಾರಿ ಆಲಯವು ಕೃಷ್ಣನ ಜನ್ಮಸ್ಥಳ ಎಂದು ಹೇಳಲಾಗುತ್ತದೆ.

ಕಾರಿಡಾರ್ ಬೇಕು, ಅದು ಇದ್ದರೆ ಭಕ್ತರಿಗೆ ದೇವಾಲಯ ಮುಟ್ಟಲು ಅನುಕೂಲ, ಹೆಚ್ಚು ಭಕ್ತರು ಪ್ರವಾಸಿಗರು ಬರುತ್ತಾರೆ ಎನ್ನುವುದು ಸರಕಾರದ ವಾದ. 2022ರಲ್ಲಿ ಸರಕಾರವು ಈ ಕಾರಿಡಾರ್ ನಿರ್ಮಾಣದ ಯೋಜನೆ ಹಾಕಿಕೊಂಡಿತ್ತು.

ಕಾರಿಡಾರ್ ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ದಾರಿ ತೆರೆಯುತ್ತದೆ. ಹೆಚ್ಚು ತೊಂದರೆಯಿಲ್ಲದೆ ಭಕ್ತರು ದೇವರನ್ನು ತಲುಪಲು ಸಾಧ್ಯವಾಗುತ್ತದೆ. ನಿವಾಸಿಗಳು, ವ್ಯಾಪಾರಿಗಳು, ಅರ್ಚಕರು ತೊಂದರೆಗೊಳಗಾದರೆ ಅವರೆಲ್ಲರನ್ನೂ ಗಮನದಲ್ಲಿ ತೆಗೆದುಕೊಳ್ಳಲಾಗುವುದು” ಎಂದು ಮಥುರಾ ಸಂಸದೆ ಬಿಜೆಪಿಯ ಹೇಮಾಮಾಲಿನಿ ಹೇಳಿದ್ದಾರೆ.

Join Whatsapp
Exit mobile version