Home ಟಾಪ್ ಸುದ್ದಿಗಳು ಹತ್ರಾಸ್ ಪ್ರಕರಣ: ಅತೀಕುರ್ರಹ್ಮಾನ್ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

ಹತ್ರಾಸ್ ಪ್ರಕರಣ: ಅತೀಕುರ್ರಹ್ಮಾನ್ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

ಅಲಹಾಬಾದ್: ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿ ಕಾನೂನುಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ-ಯುಎಪಿಎ ಅಡಿಯಲ್ಲಿ ಜೈಲು ಸೇರಿರುವ ಅತೀಕುರ್ರಹ್ಮಾನ್ ಅವರಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿದ್ದು, ಸೋಮವಾರ ಅವರನ್ನು ಜೈಲು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಅವರು ಕಳೆದ 11 ತಿಂಗಳಿನಿಂದ ಈ ಪ್ರಕರಣದ ಇನ್ನೊಬ್ಬ ಆರೋಪಿ ಸಿದ್ದೀಕ್ ಕಾಪ್ಪನ್ ಅವರೊಂದಿಗೆ ಮಥುರಾ ಜೈಲಿನಲ್ಲಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಅತೀಕುರ್ರಹ್ಮಾನ್ ಅವರನ್ನು ಕಳೆದ ವರ್ಷ ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಪಡುವಂತೆ ಕಟ್ಟುನಿಟ್ಟಾಗಿ ಸಲಹೆ ನೀಡಿದ್ದರು. ಆದರೆ ಶಸ್ತ್ರಚಿಕಿತ್ಸೆಗೆ ಮೊದಲು ಅವರನ್ನು ಯುಪಿ ಪೊಲೀಸರು ಬಂಧಿಸಿದ್ದರು.
ಯುಪಿ ಮೂಲದ ಮುಝಫರ್ ನಗರದ ನಿವಾಸಿಯಾದ ಅತೀಕುರ್ರಹ್ಮಾನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ಯ ರಾಷ್ಟ್ರೀಯ ಕೋಶಾಧಿಕಾರಿಯಾಗಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯ ಅವಧಿಯಲ್ಲಿ ಅವರ ಆರೋಗ್ಯದ ಸ್ಥಿತಿ ಹೆಚ್ಚು ಗಂಭೀರವಾಗಿತ್ತು. ಸೂಕ್ತ ಚಿಕಿತ್ಸೆ ಒದಗಿಸುವಂತೆ ಕೋರಿ ಅವರು ಮಥುರಾ ಎಡಿಜೆಗೆ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದರು. ಆದರೆ ವಿವಿಧ ಕಾರಣಗಳನ್ನು ಮುಂದೊಡ್ಡಿ ಅವರ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. ಈ ಸಂಬಂಧ ಇತ್ತೀಚೆಗೆ ಅವರು ಅಲಹಾಬಾದ್ ಹೈಕೋರ್ಟ್ ಅನ್ನು ಕೂಡ ಸಂಪರ್ಕಿಸಿದ್ದರು. ಆದರೆ ಈ ವಿಷಯದಲ್ಲಿ ನ್ಯಾಯಾಲಯ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ.

ಈ ಮಧ್ಯೆ, ರಹ್ಮಾನ್ ಅವರ ಆರೋಗ್ಯದ ಸ್ಥಿತಿ ತೀರ ಹದಗಟ್ಟಿದೆಯೆಂದು ಜೈಲು ಮತ್ತು ಕುಟುಂಬದ ಮೂಲಗಳು ಮಾಹಿತಿ ನೀಡಿದೆಯೆಂದು ಅವರ ಪರ ವಕೀಲರಾದ ಸೈಫನ್ ಶೇಖ್ ತಿಳಿಸಿದ್ದಾರೆ. ಮಾತ್ರವಲ್ಲ ಚಿಂತಾಜನಕ ಸ್ಥಿತಿಯಲ್ಲಿರುವ ಅತೀಕುರ್ರಹ್ಮಾನ್ ಅವರನ್ನು ಜೈಲು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.

Join Whatsapp
Exit mobile version