ದಕ್ಷಿಣ ಕನ್ನಡದಲ್ಲಿ ಇನ್ನು ಮುಂದೆ ಮಾಸ್ಕ್ ಕಡ್ಡಾಯ : ಮಾಲ್, ಬಸ್ ನಿಲ್ದಾಣಗಳಿಗೆ ಅನಿರೀಕ್ಷಿತ ಭೇಟಿ ಕೊಟ್ಟು ‘ಕೋವಿಡ್ ಶಾಕ್’ ನೀಡಿದ ಜಿಲ್ಲಾಧಿಕಾರಿ !

Prasthutha|

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಕೊರೊನಾ 2ನೇ ಅಲೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರಲ್ಲಿ ಇನ್ಮುಂದೆ ಮಾಸ್ಕ್ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಆದೇಶಿಸಿದ್ದಾರೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಬೇಕಾಗಿ ಇಂದು ಮಂಗಳೂರಲ್ಲಿ ಸಾಂಕೇತಿಕವಾಗಿ ಡಿಸಿ, ಡಿಸಿಪಿ, ಆರೋಗ್ಯಾಧಿಕಾರಿ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳೂರು ನಗರದಲ್ಲಿ ಮಾಸ್ಕ್ ಧರಿಸದವರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಕೂಡಾ ನೀಡಿದ್ದಾರೆ. ನಗರದಲ್ಲಿ ಬಸ್ ನಿಲ್ದಾಣ, ಮಾಲ್, ಅಂಗಡಿ ಮುಂಗಟ್ಟುಗಳಲ್ಲಿದ್ದ ಸಾರ್ವಜನಿಕರಿಗೆ ಮಾಸ್ಕ್ ಕುರಿತು ‘ಪಾಠ’ ಮಾಡಿದ್ದಾರೆ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರಿಗೆ ಡಿಸಿಪಿ ಹರಿರಾಮ್ ಶಂಕರ್ ಮತ್ತು  ಮಂಗಳೂರು ನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳ ತಂಡ ಈ ವೇಳೆ ಜೊತೆಯಾಗಿತ್ತು.

- Advertisement -

ಕೊರೊನಾ ಎರಡನೇ ಅಲೆ ತಡೆಗಟ್ಟಲು ಎಲ್ಲರೂ ಸಹಕರಿಸಬೇಕು. ಜನರಿಗೆ ಜಾಗೃತಿ ಮೂಡಿಸಲು ಹಲವು ಕಾರ್ಯಗಳ ಯೋಜನೆ ಹಮ್ಮಿಕೊಂಡಿದ್ದೇವೆ.  ಪ್ರತಿದಿವಸ ಒಂದು ಗಂಟೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ.  ಮಾಸ್ಕ್ ಧರಿಸದ ಬಸ್ ಚಾಲಕರು, ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ.  ಆಟೋಚಾಲಕರು, ಪ್ರಯಾಣಿಕರು ಕೂಡಾ ಮಾಸ್ಕ್ ಧರಿಸಲೇಬೇಕು.  ಮದುವೆ ಸಮಾರಂಭಗಳಲ್ಲಿ ಮಾಸ್ಕ್ ಕಡ್ದಾಯ, ನಿಯಮ ಬಿಗಿಯಾಗಿರುತ್ತದೆ.  ಸಾರ್ವಜನಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಠಿಣ ನಿಯಮ ತರಲು ಚಿಂತನೆ ನಡೆಸಿದ್ದೇವೆ.  ಕಾಲೇಜ್ ವಿದ್ಯಾರ್ಥಿಗಳು ಮಾಸ್ಕ್ ಧರಿಸದೆ ಇರುವುದು ಕಂಡು ಬರುತ್ತಿದ್ದು, ಕೋವಿಡ್ ನಿಯಂತ್ರಣಕ್ಕೆ ಪ್ರತಿಯೋರ್ವರೂ ಸಹಕರಿಸಬೇಕೆಂದು ದ.ಕ.ಜಿಲ್ಲಾಧಿಕಾರಿ ಮನವಿ ಮಾಡಿಕೊಂಡಿದ್ದಾರೆ.

Join Whatsapp