Home ಮಾಹಿತಿ ಫೆಬ್ರವರಿ 1 ರಿಂದ ಕಾರು ಖರೀದಿಸುವವರಿಗೆ ಶಾಕ್: ಬೆಲೆ ಹೆಚ್ಚಳ ಘೋಷಿಸಿದ ಮಾರುತಿ

ಫೆಬ್ರವರಿ 1 ರಿಂದ ಕಾರು ಖರೀದಿಸುವವರಿಗೆ ಶಾಕ್: ಬೆಲೆ ಹೆಚ್ಚಳ ಘೋಷಿಸಿದ ಮಾರುತಿ

ದೇಶದ ಅತಿದೊಡ್ಡ ಆಟೋಮೊಬೈಲ್ ಕಂಪನಿ ಮಾರುತಿ ಸುಜುಕಿ ಫೆಬ್ರವರಿ 1 ರಿಂದ ತನ್ನ ವಿವಿಧ ಮಾದರಿಯ ಕಾರುಗಳ ಬೆಲೆಯನ್ನು 32,500 ರೂ. ಗಳಷ್ಟು ಹೆಚ್ಚಿಸಲಿದೆ. ಈ ಕ್ರಮವು ಕಚ್ಚಾ ವಸ್ತುಗಳ ಬೆಲೆಯಲ್ಲಿನ ಹೆಚ್ಚಳದ ಪರಿಣಾಮವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ. “ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ವೆಚ್ಚಗಳು ಮತ್ತು ನಿರ್ವಹಣಾ ವೆಚ್ಚಗಳ ಕಾರಣ, ಕಂಪನಿಯು ಫೆಬ್ರವರಿ 1, 2025 ರಿಂದ ಕಾರಿನ ಬೆಲೆಗಳನ್ನು ಹೆಚ್ಚಿಸಲು ಯೋಜಿಸಿದೆ” ಎಂದು ಮಾರುತಿ ಸುಜುಕಿ ಇಂಡಿಯಾ ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿದೆ.

ಇದಕ್ಕೂ ಮೊದಲು, ಮಾರುತಿ ತನ್ನ ವಾಹನಗಳ ಬೆಲೆಯನ್ನು ಜನವರಿ 1, 2025 ರಂದು ಶೇಕಡಾ 4 ರಷ್ಟು ಹೆಚ್ಚಿಸಿತ್ತು. ನಂತರ ಮಾರುತಿ ಕಾರುಗಳ ಬೆಲೆಯನ್ನು ಹೆಚ್ಚಿಸುವ ಹಿಂದಿನ ಮುಖ್ಯ ಕಾರಣ ಇನ್ಪುಟ್ ವೆಚ್ಚದ ಹೆಚ್ಚಳವನ್ನು ಉಲ್ಲೇಖಿಸಿತ್ತು. ಇದೀಗ ಮತ್ತೊಮ್ಮೆ ಮಾರುತಿ ತನ್ನ ವಾಹನಗಳ ಬೆಲೆಯನ್ನು 32,500 ರೂ. ಗಳಷ್ಟು ಹೆಚ್ಚಿಸಲಿದೆ. ಮಾರುತಿ ತನ್ನ ಯಾವ ಮಾದರಿಯ ಬೆಲೆಯನ್ನು ಎಷ್ಟು ಹೆಚ್ಚಿಸಲಿದೆ ಎಂಬುದನ್ನು ಕೂಡ ಹೇಳಿದೆ.

ಮಾರುತಿ ಸೆಲೆರಿಯೊ ಕಂಪನಿಯ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರು. ಇದರ ಆರಂಭಿಕ ಬೆಲೆ 5.35 ಲಕ್ಷದಿಂದ 7.05 ಲಕ್ಷ ರೂ. ವರೆಗೆ ಇದೆ. ಆದರೆ, ಫೆಬ್ರವರಿ 1, 2025 ರಿಂದ ಮಾರುತಿ ಸೆಲೆರಿಯೊ ಬೆಲೆ 32,500 ರೂ. ಗಳಷ್ಟು ಹೆಚ್ಚಾಗುತ್ತದೆ. ಮಾರುತಿ ಜಿಮ್ನಿಯ ಬೆಲೆಯು ಫೆಬ್ರವರಿ 1, 2025 ರಿಂದ ಹೆಚ್ಚಾಗುವ ವಾಹನಗಳಲ್ಲಿ ಅತ್ಯಂತ ಕಡಿಮೆ ದುಬಾರಿಯಾಗಿದೆ. ಮಾರುತಿ ಈ ಕಾರಿನ ಬೆಲೆಯನ್ನು ಕೇವಲ 1500 ರೂ. ಗಳಷ್ಟು ಹೆಚ್ಚಿಸಲಿದೆ. ಅಲ್ಲದೆ, ಮಾರುತಿ ಸ್ವಿಫ್ಟ್ ಮತ್ತು ಎಸ್-ಪ್ರೆಸ್ಸೋ ಬೆಲೆ 5000 ರೂ. ಗಳಷ್ಟು ಹೆಚ್ಚಾಗಲಿದೆ.

ಎಸ್‌ಯುವಿ ಬ್ರೆಝಾ ಬೆಲೆ 20,000 ರೂ. ಮತ್ತು ಗ್ರ್ಯಾಂಡ್ ವಿಟಾರಾ 25,000 ರೂ. ಹೆಚ್ಚಳವಾಗಲಿದೆ. ಎಂಟ್ರಿ ಲೆವೆಲ್ ಸಣ್ಣ ಕಾರು ಆಲ್ಟೊ ಕೆ10 ಬೆಲೆ ಕೂಡ ರೂ. 19,500 ಮತ್ತು ಎಸ್-ಪ್ರೆಸ್ಸೋ ಬೆಲೆ ರೂ. 5,000 ಏರಿಕೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

Join Whatsapp
Exit mobile version