ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಹುಡುಗಿ ಬೇರೊಬ್ಬನೊಂದಿಗೆ ಮದುವೆಯಾಗುತ್ತಿದ್ದಾಳೆಂದು ಮನನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುಮಾರಸ್ವಾಮಿ ಲೇಔಟ್ನಲ್ಲಿ ನಡೆದಿದೆ.
ಅರುಣ್ (35) ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದು,ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.
ಯಶವಂತಪುರದ ವಸಂತಪುರ ಮೂಲದ ಅರುಣ್ 8 ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದು, ಅಕೆ ಮೈಸೂರಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು.
ಕಳೆದ 3 ವರ್ಷಗಳ ಹಿಂದೆ ಇಬ್ಬರೂ ಒಪ್ಪಿ ಚಾಮುಂಡಿಬೆಟ್ಟದಲ್ಲಿ ಮದುವೆ ಮಾಡಿಕೊಂಡಿದ್ದರು, ಆದರೆ ಯುವತಿ ನೀಟ್ ಪರೀಕ್ಷೆಯಿದ್ದು, ಅದನ್ನು ಮುಗಿಸಿ ಪೋಷಕರನ್ನು ಒಪ್ಪಿಸಿ ಬರುವುದಾಗಿ ಯುವತಿ ಬಂದಿದ್ದಳಂತೆ.
ಎರಡು ಮನೆಯವರ ಒಪ್ಪಿಸಿ ಮತ್ತೆ ಮದುವೆಯಾಗುವ ಯೋಜನೆಯಲ್ಲಿದ್ದ ಅರುಣ್, ಯುವತಿಯನ್ನು ಕಾಯುತ್ತಾ ಕುಳಿತಿದ್ದ. ನಂತರ ತಾನು ಪ್ರೀತಿಸಿದವಳಿಗೆ ಆಕೆಯ ಮನೆಯವರು ಮತ್ತೊಂದು ಮದುವೆ ಮಾಡುತ್ತಿರುವುದು ಗೊತ್ತಾಗಿದೆ.
ಮದುವೆಯ ಲಗ್ನ ಪತ್ರಿಕೆ ನೋಡಿದ ಅರುಣ್, ಯುವತಿಯನ್ನು ಸಂಪರ್ಕಿಸುವ ಯತ್ನ ಮಾಡಿದ್ದಾನೆ. ಆದರೆ, ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ.
ಕೂಡಲೇ ಮನೆಯವರು ಅಸ್ವಸ್ಥನಾಗಿ ಬಿದ್ದಿದ್ದ ಅರುಣ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ತಮಗೆ ಅನ್ಯಾಯವಾಗಿದ್ದು. ಯುವತಿಯನ್ನು ನಮ್ಮ ಮನೆಗೆ ಕಳಿಸಿಕೊಟ್ಟರೆ ಸಾಕು ಎಂದು ಅರುಣ್ ತಾಯಿ ಅಳಲು ತೋಡಿಕೊಂಡಿದ್ದಾರೆ.
ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.