Home ಟಾಪ್ ಸುದ್ದಿಗಳು ಜೆಡಿಎಸ್ ತೊರೆದು ಬಿಜೆಪಿಗೆ ಸೇರಿದ ಮರಿಲಿಂಗೇಗೌಡ

ಜೆಡಿಎಸ್ ತೊರೆದು ಬಿಜೆಪಿಗೆ ಸೇರಿದ ಮರಿಲಿಂಗೇಗೌಡ

ಹಾರೋಹಳ್ಳಿ: ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮರಿಲಿಂಗೇಗೌಡ ಸೇರಿದಂತೆ ಶನಿವಾರ ಹಲವು ನಾಯಕರು ಜೆಡಿಎಸ್ ಗೆ ವಿದಾಯ ಹೇಳಿ, ಬಿಜೆಪಿ ಸೇರ್ಪಡೆಗೊಂಡರು.

ಇಲ್ಲಿಗೆ ಸಮೀಪವಿರುವ ಹನುಮಂತನಗರದ ಮನೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ ಎನ್ ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಇವರನ್ನೆಲ್ಲ, ಪಕ್ಷದ ಕೇಸರಿ ಶಾಲು ಹಾಕುವ ಮೂಲಕ ಬಿಜೆಪಿಗೆ ಬರಮಾಡಿಕೊಳ್ಳಲಾಯಿತು.

ಮರಿಲಿಂಗೇಗೌಡರ ಮನೆಯಲ್ಲೇ ಜೈಶಂಕರ್ ಅವರು ಗೌಡರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಈರೇಗೌಡ, ಬಮೂಲ್ ಮಾಜಿ ನಿರ್ದೇಶಕ ಮರಿಯಪ್ಪ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಬಿಜೆಪಿ ಸೇರಿದರು.

ಮರಿಲಿಂಗೇಗೌಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅಶ್ವತ್ಥ ನಾರಾಯಣ ಅವರು, ‘ಬಿಜೆಪಿ ಮಾತ್ರ ಎಲ್ಲರಿಗೂ ಮುಕ್ತ ಅವಕಾಶ ನೀಡುವ ಪಕ್ಷವಾಗಿದ್ದು, ಸಮಾಜದ ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ನೀಡುವ ಸಂಸ್ಕೃತಿಯನ್ನು ಹೊಂದಿದೆ. ಮರಿಲಿಂಗೇಗೌಡರ ಸೇರ್ಪಡೆಯಿಂದ ರಾಮನಗರ ಜಿಲ್ಲೆಯಲ್ಲಿ ಬಿಜೆಪಿಗೆ ಬಲ ಬಂದಿದೆ’ ಎಂದರು.

ಕಾಂಗ್ರೆಸ್ಸನ್ನು ದೇಶದ ಜನ ತಿರಸ್ಕರಿಸಿದ್ದಾರೆ. ಜೆಡಿಎಸ್ ಬರೀ ಒಂದು ಕುಟುಂಬಕ್ಕೆ ಜೋತು ಬಿದ್ದಿರುವ ಊಳಿಗಮಾನ್ಯ ಪಕ್ಷವಾಗಿದೆ. ಬಿಜೆಪಿ ಮಾತ್ರ ದೇಶದ ಜನರಲ್ಲಿ ಭರವಸೆ ಹುಟ್ಟಿಸಿದ್ದು, ಅಭಿವೃದ್ಧಿ ಕೇಂದ್ರಿತ ರಾಜಕಾರಣದಲ್ಲಿ ನಂಬಿಕೆ ಹೊಂದಿದೆ ಎಂದು ಅವರು ನುಡಿದರು.

Join Whatsapp
Exit mobile version