Home ರಾಷ್ಟ್ರೀಯ ಉಪ ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವಾ ಕಣಕ್ಕೆ

ಉಪ ರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವಾ ಕಣಕ್ಕೆ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಮಂಗಳೂರಿನ‌ ಮಾರ್ಗರೇಟ್ ಆಳ್ವಾ  ಅವರನ್ನು ಉಪರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.

ಕೇಂದ್ರ ಸಚಿವರಾಗಿ ಕರ್ತವ್ಯ ನಿರ್ವಹಿಸಿರುವ ಮಾರ್ಗರೇಟ್ ಆಳ್ವಾ ಕಾಂಗ್ರೆಸ್ ಹಿರಿಯ ನಾಯಕಿಯಾಗಿದ್ದಾರೆ.

ಗೋವಾ, ಗುಜರಾತ್, ರಾಜಸ್ತಾನ, ಉತ್ತರಾಖಂಡ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವ ಮಾರ್ಗರೇಟ್ ಆಳ್ವ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವರು.

ನವದೆಹಲಿಯಲ್ಲಿ ಭಾನುವಾರ ನಡೆದ ವಿಪಕ್ಷಗಳ ಸಭೆಯ ಬಳಿಕ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಈ ಘೋಷಣೆ ಮಾಡಿದರು.

17 ಪಕ್ಷಗಳ ಸಭೆಯ ಮುಖಂಡರ ಸಭೆಯಲ್ಲಿ ಮಾರ್ಗರೇಟ್ ಆಳ್ವ ಅವರ ಹೆಸರನ್ನು ಉಪ ರಾಷ್ಟ್ರಪತಿ ಚುನಾವಣೆಗೆ ಅಂತಿಮಗೊಳಿಸಲಾಯಿತು. ಅವರು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪವಾರ್ ತಿಳಿಸಿದರು.

ಮಂಗಳೂರಿನ ಸಾಮಾನ್ಯ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿರುವ ಮಾರ್ಗರೇಟ್ ಆಳ್ವ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ಪದವಿ, ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.

1974ರಲ್ಲಿ ಮಾರ್ಗರೇಟ್ ಆಳ್ವಾ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾದರು. 1980, 1986 ಮತ್ತು 1992ರಲ್ಲಿ ಮೂರು ಬಾರಿ ರಾಜ್ಯಸಭೆಗೆ ಪುನರಾಯ್ಕೆಗೊಂಡರು. ಸಂಸದೀಯ ವ್ಯವಹಾರಗಳ ರಾಜ್ಯ ಸಚಿವೆ, ಯುವಜನ ಮತ್ತು ಕ್ರೀಡೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ಮಾನವ ಸಂಪನ್ಮೂಲ ಖಾತೆ ಸಚಿವರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಶನಿವಾರ ಎನ್ ಡಿಎ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು.
ಉಪ ರಾಷ್ಟ್ರಪತಿ ಚುನಾವಣೆ ಆಗಸ್ಟ್ 6ರಂದು ನಡೆಯಲಿದೆ. ಜುಲೈ 19ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

Join Whatsapp
Exit mobile version