ಮಡಿಕೇರಿ: ಮೇಕೆದಾಟು ಯೋಜನೆ ಯಶಸ್ವಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಲಕಾವೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ತಲಕಾವೇರಿಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಬ್ರಹ್ಮ ಕುಂಡಿಕೆಯಿಂದ ದೂರದಲ್ಲಿ ನಿಂತು ದರ್ಶನ ಪಡೆದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಜನವರಿ 9ರಿಂದ 19ರವರೆಗೆ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡುತ್ತೇವೆ. ಮೇಕೆದಾಟು ಯೋಜನೆ ಯಶಸ್ವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ರಾಜ್ಯದ ಹಿತಕ್ಕಾಗಿ ನಮ್ಮ ಹೋರಾಟ ನಡೆಯಲಿದೆ. ಕಾವೇರಿ ನಮ್ಮದು ನೀರು ನಮ್ಮದು ಯೋಜನೆಯಿಂದ ಎರಡು ರಾಜ್ಯಕ್ಕೂ ಅನುಕೂಲವಾಗಲಿದೆ ಎಂದು ಹೇಳಿದರು.
ಅದರಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಬೆಂಗಳೂರಿಗೆ ನೀರು ಪೂರೈಕೆ ಮಾಡಬಹುದು. ಕೇಂದ್ರ ಸರ್ಕಾರ ಪರಿಸರ ಕ್ಲಿಯರೆನ್ಸ್ ನೀಡಬೇಕು. ರಾಜ್ಯ ಸರ್ಕಾರ ಒತ್ತಡ ಹಾಕಬೇಕು. ಮೇಕೆದಾಟು ಅಣೆಕಟ್ಟು ನಿರ್ಮಾಣ ಆಗಲೇಬೇಕು. ಜೆಡಿಎಸ್ ಬಿಜೆಪಿಯವರು ಸಹ ಪಾದಯಾತ್ರೆಗೆ ಬೆಂಬಲಿಸುವುದಾಗಿ ಹೇಳಿದ್ದಾರೆ.
ಈ ನೀರಿನ ಬಳಕೆ ವಿಚಾರವಾಗಿ ಬೇಕಾದಷ್ಟು ಹೋರಾಟಗಳು ನಡೆದಿವೆ. ಬಹಳ ಮಹನಿಯರು ಇದಕ್ಕಾಗಿ ಹೋರಾಟ, ತ್ಯಾಗ ಮಾಡಿ ನ್ಯಾಯ ಕೊಡಿಸಿದ್ದಾರೆ. ಅನೇಕ ತೀರ್ಪುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ ಕೆಆರ್ ಎಸ್, ಕಬಿನಿ, ಹೇಮಾವತಿ, ಹಾರಂಗಿಯಿಂದ ಎಷ್ಟು ಪ್ರಮಾಣದ ನೀರನ್ನು ನಮ್ಮ ರೈತರು ಬಳಸಬೇಕು, ತಮಿಳುನಾಡಿಗೆ ಎಷ್ಟು ಪ್ರಮಾಣದಲ್ಲಿ ನೀರು ನೀಡಬೇಕು ಎಂಬ ತೀರ್ಮಾನವೂ ಆಗಿದೆ ಎಂದರು.
ಆದರೆ ಈ ವರ್ಷವೂ ಸೇರಿದಂತೆ ಹತ್ತಾರೂ ವರ್ಷಗಳಿಂದ 104 ಟಿಎಂಸಿಗೂ ಹೆಚ್ಚು ನೀರು ಸಮುದ್ರಕ್ಕೆ ಸೇರುತ್ತಿದೆ. ಹೀಗಾಗಿ ಅನೇಕ ವರ್ಷಗಳಿಂದ ಈ ಪ್ರದೇಶದಲ್ಲಿ ಸಮತೋಲಿತ ಅಣೆಕಟ್ಟೆ ಯೋಜನೆ ಮಾಡಬೇಕು, ಎರಡು ರಾಜ್ಯಕ್ಕೂ ನ್ಯಾಯ ಸಿಗಬೇಕು ಎಂಬ ಒತ್ತಾಸೆ ಇದೆ. ಹೀಗಾಗಿ ಮೇಕೆದಾಟು ಅಣೆಕಟ್ಟು ಕಟ್ಟಬೇಕು, ಸಮತೋಲಿತ ಯೋಜನೆ ಆಗಬೇಕು, ಅದರಿಂದ ವಿದ್ಯುತ್ ಉತ್ಪಾದನೆ, ಬೆಂಗಳೂರು ಮಹಾನಗರದ ಒಂದೂವರೆ ಕೋಟಿ ಜನರಿಗೆ ನಿರಂತರವಾಗಿ ಕುಡಿಯುವ ನೀರಿನ ಪೂರೈಕೆಯಾಗಬೇಕು, ಮಳೆ ಕೊರತೆಯಾದ ಸಮಯದಲ್ಲಿ ಕಾವೇರಿ ಜಲಾನಯನ ಪ್ರದೇಶದ ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ, ತುಮಕೂರು, ಕೋಲಾರ, ರಾಮನಗರ ಪ್ರದೇಶದ ರೈತರಿಗೆ ನೀರು ಒದಗಿಸುವುದು, ಹಾಗೂ ತಮಿಳುನಾಡಿಗೂ 66 ಟಿಎಂಸಿ ನೀರನ್ನು ಬಿಡುವ ಯೋಜನೆ ಸಿದ್ಧವಾಗಿದೆ ಎಂದರು.
ಸುಮಾರು 9900 ಕೋಟಿ ರೂ. ಮೊತ್ತದ ಈ ಯೋಜನೆಯ ವಿಸ್ತೃತ ವರದಿಯ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಕೇಂದ್ರ ಸರ್ಕಾರವೂ ಒಪ್ಪಿಗೆ ನೀಡಿದೆ. ಸುಪ್ರೀಂ ಕೋರ್ಟ್ ಕುಡಿಯುವ ನೀರಿನ ವ್ಯವಸ್ಥೆಗೆ ಯಾರ ಅಡಚಣೆಯೂ ಬೇಡ ಎಂದು ಹೇಳಿದೆ. ನೀರಾವರಿ ಸಚಿವರಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಅನುಮೋದನೆ ನೀಡಿದ್ದು, ಈ ಅಣೆಕಟ್ಟು ಕಟ್ಟಬೇಕು ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಈ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಒಪ್ಪಿಗೆ ಮಾತ್ರ ಸಿಗಬೇಕಿದೆ. ಅದು ಸಿಕ್ಕ ತಕ್ಷಣ ನಾವು ಯೋಜನೆ ಆರಂಭಿಸಬಹುದು. ಈ ಯೋಜನೆಗೆ ಅಗತ್ಯವಿರುವ ಸಣ್ಣ ಪ್ರಮಾಣದ ಭೂಮಿಯನ್ನು ಈಗಲೇ ಪಡೆಯಬಹುದಾಗಿದೆ. ಇದಕ್ಕೆ ಕನಕಪುರ ಹಾಗೂ ಮಳವಳ್ಳಿಯಲ್ಲಿ ಸ್ವಲ್ಪ ಭಾಗದ ಜಮೀನು ಬೇಕಾಗಿದೆ. ಅದನ್ನು ಬಿಟ್ಟರೆ ಉಳಿದೆಲ್ಲವೂ ಅರಣ್ಯ ಭೂಮಿ ಒಳಪಡುತ್ತದೆ. ಕನಕಪುರದ ನಮ್ಮ ಜನ ರಾಜ್ಯದ ಹಿತದೃಷ್ಟಿಗೆ ತಮ್ಮ ಜಮೀನು ನೀಡಲು ಬದ್ಧತೆ ಹೊಂದಿದ್ದಾರೆ ಎಂದು ಹೇಳಿದರು.
ಈ ಯೋಜನೆ ಕೂಡಲೇ ಆರಂಭವಾಗಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಒತ್ತಾಯ ಹಾಕಲು ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. 2022 ರ ಜನವರಿ 9 ರಿಂದ ಈ ಪಾದಯಾತ್ರೆ ಆರಂಭಿಸುತ್ತಿದ್ದೇವೆ. ಹೀಗಾಗಿ ಕಾವೇರಿ ಉಗಮವಾಗುವ ಪವಿತ್ರ ಸ್ಥಾನಕ್ಕೆ ಬಂದು ಹಿಂದೂ ಧರ್ಮದ ಶಾಸ್ತ್ರದಂತೆ ಪೂಜೆ ಸಲ್ಲಿಸಿ ನಮ್ಮ ಹೋರಾಟ ಆರಂಭಿಸುತ್ತಿದ್ದೇವೆ. ಈ ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂಬುದು ನಮ್ಮ ಸಂಕಲ್ಪ. ಜನರಿಗೆ ಕುಡಿಯುವ ನೀರು ನೀಡಬೇಕು, ಪವಿತ್ರ ನೀರು ಸದುಪಯೋಗ ಆಗಬೇಕು ಎಂದು ಈ ಹೋರಾಟ ಮಾಡುತ್ತಿದ್ದೇವೆ. ಜತೆಗೆ ಇದರಿಂದ 400 ಮೆ.ವ್ಯಾ. ವಿದ್ಯುತ್ ಉತ್ಪಾದನೆಯೂ ಆಗಲಿದೆ. ಅರ್ಧ ಬೆಲೆಯಲ್ಲಿ ವಿದ್ಯುತ್ ಉತ್ಪಾದನೆಯಾಗಲಿದೆ. ಎಲ್ಲ ರೀತಿಯಲ್ಲೂ ಅನುಕೂಲವಾಗುವ ಯೋಜನೆ ಇದಾಗಿದೆ ಎಂದರು.
ಮಹಾತ್ಮಾ ಗಾಂಧಿ ಅವರ ಕೈಂಕರ್ಯದ ಇತಿಹಾಸವಿರುವ ರಾಷ್ಟ್ರೀಯ ಪಕ್ಷದ ಸದಸ್ಯರಾಗಿ ನಾವು ಎಲ್ಲ ಪಕ್ಷ, ಸಂಘಟನೆ, ಕಾವೇರಿ ಜಲಾನಯನ ಪ್ರದೇಶದ ರೈತರು, ಎಲ್ಲ ನಾಗರೀಕರ ಪರವಾಗಿ, ಅವರ ಅನುಕೂಲಕ್ಕೆ ಈ ಪಾದಯಾತ್ರೆ ಮಾಡುತ್ತಿದ್ದೇವೆ. ಪಕ್ಷಭೇದ ಮರೆತು, ಎಲ್ಲ ಸಂಘಟನೆಗಳು ಸೇರಿದಂತೆ ಪ್ರತಿಯೊಬ್ಬರೂ ರಾಜ್ಯದ ಹಿತಕ್ಕಾಗಿ ಇದರಲ್ಲಿ ಭಾಗವಹಿಸಬೇಕು.
ಮೇಕೆದಾಟು ನಮ್ಮ ನೀರು, ನಮ್ಮ ಹಕ್ಕು. ಮೇಕೆದಾಟು ಅಣೆಕಟ್ಟೆ ರಾಜ್ಯದ ಹಣದಲ್ಲೇ ಮುಗಿಯುವ ಯೋಜನೆಯಾಗಿದ್ದು, ಎರಡು ರಾಜ್ಯದ ಜನರು ಹಾಗೂ ರೈತರಿಗೆ ಅನುಕೂಲವಾಗಲಿದೆ. ಈ ಯೋಜನೆಗೆ ಜೆಡಿಎಸ್, ಬಿಜೆಪಿ, ರೈತ ಸಂಘಟನೆ, ಮಠಾಧಿಪತಿಗಳು, ಇತರೆ ಸಂಘಟನೆಗಳು ಬೆಂಬಲ ಸೂಚಿಸಿದ್ದು, ನಾನು ಪಕ್ಷಾತೀತವಾಗಿ ಎಲ್ಲರನ್ನು ಈ ಪಾದಯಾತ್ರೆಗೆ ಆಹ್ವಾನಿಸುತ್ತೇನೆ. ಈ ಪಾದಯಾತ್ರೆಗೆ ಕಾಂಗ್ರೆಸ್ ಮುಂದಾಳತ್ವ ವಹಿಸಿರಬಹುದು. ಆದರೆ ಇದು ಎಲ್ಲರ ಹೋರಾಟವಾಗಿದೆ. ಕೊಡಗಿನ ವೀರ ಹಾಗೂ ಪವಿತ್ರ ಭೂಮಿಯಲ್ಲಿ ಪೂಜೆ ಮಾಡಿ ನಮ್ಮ ಹೋರಾಟದ ಹೆಜ್ಜೆ ಇಡುತ್ತಿದ್ದೇವೆ.
ಈ ವಿಚಾರದಲ್ಲಿ ತಮಿಳುನಾಡು ನಾಯಕರ ಜತೆ ಚರ್ಚೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಯೋಜನೆಯಿಂದ ಅವರಿಗೆ ಹೆಚ್ಚು ಅನುಕೂಲವಾಗಲಿದ್ದು, ಅವರು ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಅವರಿಗೂ ನ್ಯಾಯ ಸಿಗುತ್ತದೆ. ವಿರೋಧ ಮಾಡುವುದರಲ್ಲಿ ಅಲ್ಲಿನ ಎಲ್ಲ ರಾಜಕೀಯ ಪಕ್ಷಗಳು ಮುಂದೆ ನಿಲ್ಲುತ್ತವೆ. ಈಗಾಗಲೇ ಈ ಜಲಾನಯನ ವ್ಯಾಪ್ತಿಯಲ್ಲಿನ ಎಲ್ಲ ಆಣೆಕಟ್ಟುಗಳ ನಿಯಂತ್ರಣವನ್ನು ಕೇಂದ್ರದ ಕೈಗೆ ನೀಡಲಾಗಿದೆ. ಯಾರಿಗೆ, ಯಾವಾಗ, ಎಷ್ಟು ನೀರು ಬಿಡಬೇಕು ಎಂದು ಅವರೇ ನಿರ್ಧರಿಸುತ್ತಾರೆ. ನಾವು ಇದಕ್ಕೆ ತಲೆಬಾಗಿರುವಾಗ, ಈ ಯೋಜನೆ ಅನುಷ್ಠಾನಕ್ಕೆಮಾಡಲು ಅವರು ಸಹಕಾರ ನೀಡಲಿ ಮನವಿ ಮಾಡುತ್ತೇನೆ.
ಈ ಯೋಜನೆಯಿಂದ ಅರಣ್ಯ ಭೂಮಿ, ಆನೆ ಕಾರಿಡಾರ್ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ, ‘ಇಲ್ಲಿ ನೀರು ಬಂದು ಅರಣ್ಯ ಪ್ರದೇಶ ಇನ್ನಷ್ಟು ಬೆಳೆಯಲಿದ್ದು, ಪ್ರಾಣಿಗಳಿಗೂ ನೆರವಾಗಲಿದೆ. ಅರಣ್ಯಕ್ಕೆ ಅನುಕೂಲವಾಗುವ ಯೋಜನೆ ಇದಾಗಿದೆ’ ಎಂದರು.