Home ಟಾಪ್ ಸುದ್ದಿಗಳು ಗೂಂಡಾ ಕಾಯ್ದೆಯಡಿ ಮಣಿಕಂಠನನ್ನು ಬಂಧಿಸಿ: ಮಲ್ಲಪ್ಪ ಹೊಸ್ಮನಿ

ಗೂಂಡಾ ಕಾಯ್ದೆಯಡಿ ಮಣಿಕಂಠನನ್ನು ಬಂಧಿಸಿ: ಮಲ್ಲಪ್ಪ ಹೊಸ್ಮನಿ

ಚಿತ್ತಾಪೂರ: ಅಪಘಾತದ ಗಾಯವನ್ನು ತೋರಿಸಿ ಜವಾಬ್ದಾರಿಯುತ ಸಚಿವರ ಮೇಲೆ ಕೊಲೆ ಯತ್ನದ ಸುಳ್ಳು ಆರೋಪ ಹೊರಿಸಿ ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುತ್ತಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಗೂಂಡಾ ಕಾಯ್ದೆಯಡಿ ಪೊಲೀಸ್ ಇಲಾಖೆ ಸ್ವಯಂ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಕಂಠ ಕ್ಷೇತ್ರದಲ್ಲಿ ಅಶಾಂತಿ ಮೂಡಿಸಿ ಜನರಿಗೆ ತಪ್ಪು ಮಾಹಿತಿ ಹರಡುವ, ಪೊಲೀಸರಿಗೆ ದಾರಿ ತಪ್ಪಿಸುವ, ಕಾನೂನು ದುರುಪಯೋಗದ ಕೆಲಸ ಮಾಡಿದ್ದಾರೆ. ಪ್ರಚಾರಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಬಳಸಿಕೊಂಡು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಇದರಿಂದಾಗಿ ಜವಾಬ್ದಾರಿ ಇರುವ ಸಚಿವರ ಮನಶಾಂತಿ ಕೆಡಿಸುತ್ತಿದ್ದಾರೆ. ತಪ್ಪು ಕಲ್ಪನೆ ಬರುವಂತೆ ಮಾಡುತ್ತಿದ್ದಾರೆ. ರಾಜ್ಯದ ಶಾಂತಿ ಕದಡುತ್ತಿದ್ದಾರೆ. ಮಣಿಕಂಠ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಆರೋಗ್ಯದಾಯಕ ರಾಜಕೀಯ ಮಾಡುವುದು ಬಿಟ್ಟು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ಪ್ರಿಯಾಂಕ್ ಅವರೇ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದರು. ಕಾರು ಅಪಘಾತ ಘಟನೆಯೆಂದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಅಪಘಾತ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಸಂಚು ನಡೆಸಿದ ಮಣಿಕಂಠ, ಹಲ್ಲೆ ನಡೆದಿದೆ ಎಂದು ಕಥೆ ಕಟ್ಟಿ ಸುಳ್ಳು ಹೇಳಿ ಸಚಿವರ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂದು ಅವರು ಹೇಳಿದರು.

Join Whatsapp
Exit mobile version