ಮಂಗಳೂರು: ಎಸ್ವೈಎಸ್ ಮತ್ತು ಎಸೆಸ್ಸೆಫ್ ದ.ಕ.ಜಿಲ್ಲಾ (ವೆಸ್ಟ್) ವತಿಯಿಂದ ‘ಭೀತಿಯ ಜಗತ್ತಿಗೆ ಪ್ರೀತಿಯ ಪ್ರವಾದಿ’ ಎಂಬ ಧ್ಯೇಯವಾಕ್ಯದೊಂದಿಗೆ ನಗರದ ಬಾವುಟಗುಡ್ಡೆಯಿಂದ ಕ್ಲಾಕ್ ಟವರ್ ವರೆಗೆ ಟೀಮ್ ಇಸಾಬಾ ನಡೆಸಿದ ಇಲಲ್ ಹಬೀಬ್-ಮೀಲಾದ್ ರ್‍ಯಾಲಿಯು ದಫ್, ತಾಲೀಮು ಪ್ರದರ್ಶನದ ಮೂಲಕ ನೆರವೇರಿತು.
ಸೈಯದ್ ಶಿಹಾಬುದ್ದೀನ್ ಮದಕ ತಂಙಳ್ ನೇತೃತ್ವದಲ್ಲಿ ಚಾಲನೆಗೊಂಡ ರ್‍ಯಾಲಿಯ ಸಮಾರೋಪ ಕಾರ್ಯಕ್ರಮವನ್ನು ಎಸೆಸ್ಸೆಫ್ (ವೆಸ್ಟ್) ಅಧ್ಯಕ್ಷ ನವಾಝ್ ಸಖಾಫಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮಾತನಾಡಿ , ಮನುಷ್ಯರ ಮಧ್ಯೆ ಪ್ರೀತಿ, ತುಂಬಿದ, ಮಾನವೀಯತೆ ಬೆಸೆದ ಪ್ರವಾದಿ ಮುಹಮ್ಮದ್ (ಸ)ರವರ ಜೀವನ ಸಂದೇಶ ಸಾರ್ವಕಾಲಿಕವಾದುದು. ಅವರ ಸಂದೇಶವನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಿಡಿಸಿಕೊಳ್ಳಬೇಕು. ಆ ಮೂಲಕ ಇಸ್ಲಾಮ್ನ ನೈಜ ಸಂದೇಶವನ್ನು ಜಗತ್ತಿಗೆ ಸಾರಲು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೇಖಕ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಎಸ್ವೈಎಸ್ (ವೆಸ್ಟ್) ಅಧ್ಯಕ್ಷ ಮುಹಮ್ಮದಲಿ ಸಖಾಫಿ, ಇಸಾಕ್ ಝುಹ್ರಿ, ಇಕ್ಬಾಲ್ ಮದ್ಯನಡ್ಕ, ಖುಬೈಬ್ ತಂಙಳ್ ಮತ್ತಿತರರು ಉಪಸ್ಥಿತರಿದ್ದರು.