ಮಂಗಳೂರು ‘ಗೋಲಿಬಾರ್’ ಸಂಬಂಧ ಪೊಲೀಸ್ ಕುಟುಂಬದ ವಿರುದ್ಧ ಪೋಸ್ಟ್ | ಒಂದೂವರೆ ವರುಷದ ಬಳಿಕ ಆರೋಪಿ ಅರೆಸ್ಟ್

Prasthutha|

ಮಂಗಳೂರು: ನಗರದಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಗೋಲಿಬಾರ್ ನಂತರ ಪೊಲೀಸರ ಕುಟುಂಬಿಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಪ್ರಕರಣ ಸಂಬಂಧ ನಗರ ಪೊಲೀಸರು ಓರ್ವನನ್ನ ಬಂಧಿಸಿದ್ದಾರೆ.

- Advertisement -

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಯೋಗಿ ಯಾನೆ ಯೋಗೀಶ್ (28) ಬಂಧಿತ ಆರೋಪಿ. ಈತ ಮಂಗಳೂರು ನಗರದಲ್ಲಿ ನಡೆದಿದ್ದ ಗೋಲಿಬಾರ್ ಬಳಿಕ “ಪೊಲೀಸರ ಮನೆಯ ಹೆಂಗಸರನ್ನ ಮನೆಗೆ ನುಗ್ಗಿ ಅತ್ಯಾಚಾರ ಮಾಡಿ ಸುಟ್ಟು ಹಾಕಬೇಕು” ಎಂದು ಕೆಟ್ಟದ್ದಾಗಿ ಫೇಸ್ ಬುಕ್ ನ ನಕಲಿ ಖಾತೆ ಮೂಲಕ ಪೋಸ್ಟ್ ಮಾಡಿದ್ದು, ಅದನ್ನ ಮನಸುಗಳ ಮಾತು ಮಧುರ ಅನ್ನೋ ಪೇಜ್ ವೊಂದಕ್ಕೆ ಟ್ಯಾಗ್ ಮಾಡಿದ್ದನು. ಅಲ್ಲದೇ ಅನಂತರ ಅದರ ಸ್ಕ್ರೀನ್ ಶಾಟ್ ತೆಗೆದು ಆರೋಪಿಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದನು. ಈ ಕುರಿತು ನಗರದ ಸೈಬರ್ ಠಾಣೆಯಲ್ಲಿ, ಪೊಲೀಸರ ಹಾಗೂ ಅವರ ಕುಟುಂಬಿಕರ ವಿರುದ್ಧ ದುಷ್ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಪೋಸ್ಟ್ ಮಾಡಿದ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಇದೀಗ ಆರೋಪಿಯನ್ನ ಪತ್ತೆ ಹಚ್ಚಿರುವ ಪೊಲೀಸರು ಜುಲೈ 2ರಂದು ಬಂಧಿಸಿ JMFC ನ್ಯಾಯಾಲಯದ ಮುಂದೆ ಒಪ್ಪಿಸಲಾಗಿ, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

2019 ರ ಡಿಸೆಂಬರ್ 19ರಂದು ಕೇಂದ್ರ ಸರಕಾರ ಜಾರಿಗೆ ತಂದ ಸಿಎಎ ಕಾಯ್ದೆ ವಿರೋಧಿಸಿ ನಗರದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದು ಬಳಿಕ ಪೊಲೀಸ್ ಗೋಲಿಬಾರ್ ನಡೆದಿತ್ತು. ಗೋಲಿಬಾರ್ ನಲ್ಲಿ ಇಬ್ಬರು ಯುವಕರು ಪ್ರಾಣ ತೆತ್ತಿದ್ದರು.

Join Whatsapp