►ರೆಹ್ಮಾನ್ ಕೊಲೆ ಪ್ರಕರಣದ ಬಗ್ಗೆ ಪೊಲೀಸರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರೆ ಗೊಂದಲ ನಿವಾರಣೆ : SDPI
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೂರು ಕೊಲೆ ಕೃತ್ಯಗಳಿಗೆ ಸಂಬಂಧಿಸಿ ಆಡಳಿತ ವ್ಯವಸ್ಥೆಯ ತಾರತಮ್ಯದ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಬರೆಯುವವರು ಮತ್ತು ಚರ್ಚೆ ಮಾಡುವವರಿಗೆ ಪೊಲೀಸರು ನೋಟಿಸ್ ಮೇಲೆ ನೋಟಿಸ್ ನೀಡುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ, ಪೊಲೀಸರ ಈ ಕ್ರಮಗಳು ಖಂಡನೀಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಹೇಳಿದರು.
ನಗರದ SDPI ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖಡಕ್ ಅಧಿಕಾರಿಗಳು ಎಂದು ಹೆಸರು ಪಡೆದಿರುವ ನೂತನ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮತ್ತು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಅರುಣ್ ಕೆ. ಆರಂಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಸಮಾಜಘಾತುಕರಿಗೆ ಕಾನೂನಿನ ಭಯ ಹುಟ್ಟಿಸಿದ್ದರು. ಬಳಿಕ ಆರ್.ಅಶೋಕ್, ವಿಜಯೇಂದ್ರ ಮತ್ತು ಡಿ.ವಿ ಸದಾನಂದ ಗೌಡ ನೇತೃತ್ವದ ಬಿಜೆಪಿ ತಂಡ ಮಂಗಳೂರು ಭೇಟಿ ನೀಡಿ ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಎಚ್ಚರಿಕೆ ನೀಡಿತ್ತು. ಬಿಜೆಪಿಯವರು ಒತ್ತಡ ಹೇರಿದ ಬಳಿಕ ಪೊಲೀಸರ ಕಾರ್ಯಾಚರಣೆಗಳಿಗೆ ಕಡಿವಾಣ ಬಿದ್ದಿದ್ದು, ಕೊಲೆ ಪ್ರಕರಣದ ನೈಜ ಆರೋಪಿಗಳ ಬಂಧನ ವಿಳಂಬವಾಗುತ್ತಿದೆ ಎಂದು ದೂರಿದರು.
ಪ್ರತೀಕಾರದ ಕೊಲೆ ನಡೆಸುವುದಾಗಿ ಪ್ರಚೋದನಕಾರಿ ಭಾಷಣ ಮಾಡಿದ್ದ ಭರತ್ ಕುಮ್ಡೇಲ್ ಮತ್ತು ಶ್ರೀಕಾಂತ್ ಶೆಟ್ಟಿಯ ಬಂಧನ ನಡೆದಿಲ್ಲ. ರೆಹ್ಮಾನ್ ಕೊಲೆ ಪ್ರಕರಣದ ಸಂಚುಕೋರರು ಯಾರು ಎಂದು ಪೊಲೀಸರು ತಿಳಿಸಿಲ್ಲ. ಆ ಕೊಲೆ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿಲ್ಲ, ಪೊಲೀಸರು ಪ್ರಶ್ನಿಸಿದವರಿಗೆ ನೋಟಿಸ್ ನೀಡುತ್ತಿದ್ದಾರೆ, ಪೊಲೀಸರ ಕ್ರಮಗಳು ಕೇವಲ ಸೋಷಿಯಲ್ ಮೀಡಿಯಾ ವಿಚಾರಗಳಿಗೆ ಸೀಮಿತವಾಗಿದೆ ಎಂದರು. ಪೊಲೀಸರು ಪ್ರತಿಭಟನೆಗೆ ಹೊಸ ನಿಬಂಧನೆ ವಿಧಿಸಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗುಂಪು ಹತ್ಯೆ ಪ್ರಕರಣದಲ್ಲಿ ಪಿಸ್ತೂಲ್ ರವಿ ಪಾತ್ರ ಇಲ್ಲದಿದ್ದಲ್ಲಿ ಆತ ಅಡಗಿ ಕೂತಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಆರೋಪಿಗಳು ಮುಸ್ಲಿಮರಾಗಿದ್ದರೆ ಪೊಲೀಸರು ಮನೆಮನೆಗೆ ನುಗ್ಗಿ ಆರೋಪಿಗಳ ಪೋಷಕರು ಕುಟುಂಬಸ್ಥರು ಸಂಬಂಧಿಕರನ್ನು ಬಿಡದರೆ ಠಾಣೆಗೆ ಎಳೆದುಕೊಂಡು ಹೋಗುತ್ತಾರೆ, ಆದರೆ ಅಮಾಯಕ ಮುಸ್ಲಿಂ ಯುವಕರ ಕೊಲೆ ಪ್ರಕರಣಗಳಲ್ಲಿ ಪೊಲೀಸರು ಆ ರೀತಿ ಕ್ರಮಕೈಗೊಂಡಿಲ್ಲ ಎಂದರು.
ವಯನಾಡಿನ ಅಶ್ರಫ್ ಮತ್ತು ಕೊಳತ್ತಮಜಲಿನ ರೆಹಮಾನ್ ಕೊಲೆಗೆ ಸಂಘಪರಿವಾರ ಬಿತ್ತಿದ ಮುಸ್ಲಿಂ ದ್ವೇಷವೇ ಕಾರಣ ಎಂದು ಆರೋಪಿಸಿದ ಅವರು, ಪಾತ್ರಧಾರಿಗಳ ಬಂಧನ ಮಾಡಿದರೆ ಸಾಲದು, ಸೂತ್ರಧಾರರ ಬಂಧನ ಆಗಬೇಕು, ಸಂಚುಕೋರರ ಬಂಧನವಾಗಬೇಕೆಂದು ಆಗ್ರಹಿಸಿದರು. ಅಶ್ರಫ್ ಮತ್ತು ರೆಹಮಾನ್ ಕೊಲೆ ಪ್ರಕರಣವನ್ನು ಎಸ್ ಐಟಿ ತನಿಖೆಗೆ ಒಪ್ಪಿಸಿ ಎರಡು ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಪೊಲೀಸರು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಬಾರದು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ SDPI ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಅಮಾಯಕ ವ್ಯಕ್ತಿಯೊಬ್ಬರ ಬಂಧನ ನಡೆದಿದೆ, ಆದರೆ ಅಶ್ರಫ್ ಮತ್ತು ರೆಹ್ಮಾನ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಬಂಧನವಾಗಿಲ್ಲ ಎಂದರು. ಬಿಜೆಪಿಯ ಒತ್ತಡಕ್ಕೆ ಮಣಿದು ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ ಐಎ ತನಿಖೆಗೆ ಒಪ್ಪಿಸಿರುವ ರಾಜ್ಯ ಸರ್ಕಾರ, ಅಶ್ರಫ್ ಮತ್ತು ರೆಹ್ಮಾನ್ ಕೊಲೆ ಪ್ರಕರಣವನ್ನು ಎಸ್ ಐಟಿ ತನಿಖೆಗೆ ನೀಡುವಂತೆ ಆಗ್ರಹಿಸದರೂ ಕಿವಿಗೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರಿಗೆ ಸಾಕ್ಷಿ ನೀಡಲು ನಾವು ತನಿಖಾಧಿಕಾರಿಗಳಲ್ಲ, ತನಿಖಾಧಿಕಾರಿಗಳು ಸಾಕ್ಷಿ ಕಲೆಹಾಕಬೇಕು, ಕುಡುಪು ಪರಿಸರದ ಪ್ರಮುಖ ಮುಖಂಡನಾಗಿರುವ ಪಿಸ್ತೂಲ್ ರವಿ ಏಕೆ ಅಡಗಿ ಕೂತಿದ್ದಾನೆ ಎಂದು ತನಿಖಾಧಿಕಾರಿ ನಿಷ್ಪಕ್ಷಪಾತ ತನಿಖೆ ನಡೆಸಲಿ ಎಂದು ಮನವಿ ಮಾಡಿದರು. ಅಶ್ರಫ್ ಮತ್ತು ರೆಹ್ಮಾನ್ ಕೊಲೆ ಪ್ರಕರಣವನ್ನು ಎಸ್ ಐಟಿ ತನಿಖೆಗೊಪ್ಪಿಸಿ ಕುಟುಂಬಕ್ಕೆ ತಲಾ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂನಿಶ್ ಅಲಿ, ಸುಹಾಸ್ ಶೆಟ್ಟಿ ಹತ್ಯೆ ನಡೆದಾಗ ಅಂದಿನ ಪೊಲೀಸ್ ಕಮಿಷನರ್ ಸುದ್ದಿಗೋಷ್ಠಿ ನಡೆಸಿ ಕೊಲೆಗೆ ಕಾರಣ ಏನೆಂಬುದನ್ನು ತಿಳಿಸಿದ್ದರು, ಆದರೆ ರೆಹ್ಮಾನ್ ಹತ್ಯೆ ಏಕೆ ನಡೆದಿದೆ ಎಂದು ಪೊಲೀಸರು ಈವರೆಗೆ ತಿಳಿಸಿಲ್ಲ, ಆ ಬಗ್ಗೆ ಪೊಲೀಸರು ಸುದ್ದಿಗೋಷ್ಠಿ ನಡೆಸಿಲ್ಲ, ರಹೀಂ ಏಕೆ ಕೊಲೆಯಾದ ಎಂದು ಆತನ ಕುಟುಂಬಕ್ಕೆ ಗೊತ್ತಿಲ್ಲ ಎಂದರು. ಬಂಧಿತ 9 ಮಂದಿಯ ಪಾತ್ರ ಏನೆಂದು ಬೆಳಕಿಗೆ ಬಂದಿಲ್ಲ, ಬಂಧಿತರು ನೀಡಿರುವ ಮಾಹಿತಿ ಬಹಿರಂಗವಾಗಿಲ್ಲ, ಇದರಿಂದ ಜನರಲ್ಲಿ ಸಂಶಯ ಹೆಚ್ಚಾಗಿ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರೆ ಉಂಟಾಗಿರುವ ಗೊಂದಲ ನಿವಾರಣೆಯಾಗಬಹುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ SDPI ಮಂಗಳೂರು ನಗರ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಉಪಸ್ಥಿತರಿದ್ದರು.