ಮಂಗಳೂರು: ಇಪ್ಪತ್ತಮೂರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ 23 ಬಾರಿ ವಾರೆಂಟ್ ಹೊರಡಿಸಿದ್ದರೂ ಕಳೆದೆರಡು ವರ್ಷಗಳಲ್ಲಿ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಟೆಂಡ್ ಆರೋಪಿ ಅಝರುದ್ದೀನ್ ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಅಜರುದ್ದೀನ್ ಅಲಿಯಾಸ್ ಅಜರ್ ಅಲಿಯಾಸ್ ನಾಥು ( 29) ಬಂಧಿತ ಆರೋಪಿ. ಈತ ಕಾಟಿಪಳ್ಳ ಗ್ರಾಮದ ಕೃಷ್ಣಾಪುರ ನಿವಾಸಿಯಾಗಿದ್ದು, ಈತನ ಮೇಲೆ ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 23 ಪ್ರಕರಣಗಳಲ್ಲಿ ಜಾಮೀನು ರಹಿತ ವಾರಂಟ್ ಇದೆ. ಅಝರುದ್ದೀನ್ ವಿರುದ್ಧ ಸುರತ್ಕಲ್ ಠಾಣೆಯಲ್ಲಿ 16, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3, ಉಡುಪಿ ಜಿಲ್ಲೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ.
ಈತನನ್ನು ಮಂಗಳೂರು ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಆಯುಕ್ತರಾದ ಮನೋಜ್ ಕುಮಾರ್ ಅವರ ನಿರ್ದೇಶನದಂತೆ ಸುರತ್ಕಲ್ ಪೊಲೀಸ್ ಠಾಣೆಯ ನಿರೀಕ್ಷಕರಾದ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರಾದ ಮಲ್ಲಿಕಾರ್ಜುನ್, ಸಿಬ್ಬಂದಿ ಅಜಿತ್ ಮ್ಯಾಥ್, ಮಣಿಕಂಠ, ಕಾರ್ತಿಕ್ ಅವರ ತಂಡ ದಸ್ತಗಿರಿ ಮಾಡಿ ಮಂಗಳೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಆರೋಪಿಯನ್ನು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.