►ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಮತ್ತೊಂದು ಹೋರಾಟ.. 2 ಲಕ್ಷ ಜನರನ್ನು ಸೇರಿಸಲು ತಯಾರಿ
ಮಂಗಳೂರು : 2020ರ ಆರಂಭದಲ್ಲಿ ಕೇಂದ್ರ ಸರ್ಕಾರದ ಸಿಎಎ ಕಾಯ್ದೆ ಮತ್ತು ಎನ್ ಆರ್ ಸಿ ವಿರೋಧಿಸಿ ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಬೃಹತ್ ಹೋರಾಟ ನಡೆದಿತ್ತು. ಅಂದಿನ ಪ್ರತಿಭಟನೆಯಲ್ಲಿ 1 ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಈಗ ಅದೇ ಮೈದಾನದಲ್ಲಿ ಆ ಹೋರಾಟವನ್ನೂ ಮೀರಿಸುವ ದೊಡ್ಡ ಮಟ್ಟದ ಮತ್ತೊಂದು ಹೋರಾಟಕ್ಕೆ ಮಂಗಳೂರಿನ ಮುಸ್ಲಿಂ ಸಮುದಾಯ ಸಿದ್ಧತೆ ನಡೆಸುತ್ತಿರುವುದು ತಿಳಿದುಬಂದಿದೆ.
ಕೇಂದ್ರ ಸರ್ಕಾರದ ಉಮೀದ್ (ವಕ್ಫ್ ತಿದ್ದುಪಡಿ) ಕಾಯ್ದೆ ವಿರೋಧಿಸಿ ಏಪ್ರಿಲ್ 18ರಂದು ಮಂಗಳೂರಿನಲ್ಲಿ ಬೃಹತ್ ವಕ್ಫ್ ಸಂರಕ್ಷಣಾ ಪ್ರತಿಭಟನೆ ನಡೆಸಲು ಕರ್ನಾಟಕ ಉಲೆಮಾ ಕೋಆರ್ಡಿನೇಷನ್ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ ಎಂದು ಪ್ರಸ್ತುತ ನ್ಯೂಸ್ ಗೆ ಖಚಿತ ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ನಾಳೆ ಅಧಿಕೃತ ಘೋಷಣೆ ಹೊರಡಿಸುವ ಸಾಧ್ಯತೆ ಇದೆ ಎಂದು ಸಮಿತಿಯ ಪ್ರಮುಖರೊಬ್ಬರು ಪ್ರಸ್ತುತ ನ್ಯೂಸ್ ಗೆ ತಿಳಿಸಿದ್ದಾರೆ.
ಸಿಎಎ, ಎ’ ಆರ್ ಸಿ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆದ ಮಂಗಳೂರು ನಗರದ ಹೊರವಲಯದ ಅಡ್ಯಾರ್ ಕಣ್ಣೂರು ಮೈದಾನದಲ್ಲೇ ವಕ್ಫ್ ಸಂರಕ್ಷಣಾ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದ್ದು, ಸುಮಾರು 2 ಲಕ್ಷ ಜನರನ್ನು ಸೇರಿಸಿ ಹೋರಾಟ ನಡೆಸಲು ಯೋಜನೆ ರೂಪಿಸಲಾಗಿದೆ, 2 ಲಕ್ಷ ಜನರು ಸೇರಿದರೆ ಈ ಹೋರಾಟ ಕರಾವಳಿಯ ಅತೀ ದೊಡ್ಡ ಪ್ರತಿಭಟನೆ ಎನಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಉದ್ದೇಶಿತ ಏಪ್ರಿಲ್ 18ರ ಪ್ರತಿಭಟನೆಯಲ್ಲಿ ಭಾರತದ ಗ್ರ್ಯಾಂಡ್ ಮುಫ್ತಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಮತ್ತು ಸಮಸ್ತ ಕೇರಳ ಜಮಿಯತುಲ್ ಉಲೆಮಾ ಅಧ್ಯಕ್ಷ ಸೈಯ್ಯದ್ ಜಿಫ್ರಿ ತಂಙಳ್ ಭಾಗಿಯಾಗುವ ಸಾಧ್ಯತೆ ಇದೆ. ಇನ್ನಿತರ ಪ್ರಮುಖರನ್ನು ಕರೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಮಂಗಳೂರು ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿ ಚಿಕ್ಕಮಗಳೂರು ಮತ್ತು ಹಾಸನ ಸಂಯುಕ್ತ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಇವರ ನೇತೃತ್ವದಲ್ಲಿ ಐತಿಹಾಸಿಕ ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲೇ ಇಬ್ಬರು ಖಾಝಿಯಾಗಲು ಈ ಬಗ್ಗೆ ವೀಡಿಯೋ ಸಂದೇಶ ನೀಡುವ ಸಾಧ್ಯತೆ ಇದೆ. ನಾಳೆ ಜುಮಾ ನಮಾಝ್ ವೇಳೆ ಎಲ್ಲಾ ಮಸೀದಿಗಳಲ್ಲಿ ಈ ಬಗ್ಗೆ ಖತೀಬರು ಆಯಾ ಮೊಹಲ್ಲಾಗಳ ಮುಸ್ಲಿಮರಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಏಪ್ರಿಲ್ 18ರ ಬೃಹತ್ ಹೋರಾಟದ ಸಂಬಂಧ ಇಂದು ಸಂಜೆ ಮಂಗಳೂರಲ್ಲಿ ಕರ್ನಾಟಕ ಉಲೆಮಾ ಕೋಆರ್ಡಿನೇಷನ್ ಸಭೆ ಸೇರಲಿದೆ. ಏಪ್ರಿಲ್ 12ರ ಶನಿವಾರ ಮತ್ತೊಂದು ಸುತ್ತಿನ ಸಭೆ ಬಳಿಕ ಮಾಧ್ಯಮಗೋಷ್ಠಿ ನಡೆಸಲು ತೀರ್ಮಾನಿಸಲಾಗಿದೆ. ಏ.13ರಂದು ಮುಸ್ಲಿಂ ನಾಯಕರು, ಸಮುದಾಯದ ಪ್ರಮುಖರು, ತಜ್ಞರು ಮತ್ತು ಸಂಘಸಂಸ್ಥೆಗಳ ಜೊತೆ ಸಭೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.