ಮಂಗಳೂರು: ದುಬೈಗೆ ತೆರಳಬೇಕಿದ್ದ ವಿಮಾನ 13 ಗಂಟೆ ತಡ

Prasthutha|

►ರಾತ್ರಿ ಪೂರ್ತಿ ನಿದ್ದೆಯಿಲ್ಲದೆ ವಿಮಾನ ನಿಲ್ದಾಣದಲ್ಲೇ ಕಾದ ಪ್ರಯಾಣಿಕರು

- Advertisement -


ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣ ಬೆಳೆಸಬೇಕಿದ್ದ ಏರ್ ಇಂಡಿಯಾ ವಿಮಾನದಲ್ಲಿ (ಐಎಕ್ಸ್ 813) ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಬದಲಿ ವಿಮಾನದಲ್ಲಿ ಮಂಗಳವಾರ ಮಧ್ಯಾಹ್ನ ಪ್ರಯಾಣ ಬೆಳೆಸಿದರು.


ಈ ವಿಮಾನವು ತಡವಾಗಿ ಪ್ರಯಾಣ ಬೆಳೆಸಿದ್ದರಿಂದ ಪ್ರಯಾಣಿಕರು 13 ಗಂಟೆಗೂ ಹೆಚ್ಚು ಕಾಲ ವಿಮಾನ ನಿಲ್ದಾಣದಲ್ಲೇ ಕಾಯಬೇಕಾಯಿತು.

- Advertisement -

ನಿನ್ನೆ ರಾತ್ರಿ 11.15 ಕ್ಕೆ ಮಂಗಳೂರು ಏರ್ಪೋರ್ಟ್ ನಿಂದ ದುಬೈ ತೆರಳಬೇಕಿದ್ದ ವಿಮಾನ ಕೊನೆ ಕ್ಷಣದಲ್ಲಿ ತಾಂತ್ರಿಕ ತೊಂದರೆಗೀಡಾಗಿತ್ತು. ತಾಂತ್ರಿಕ ತೊಂದರೆ ಎದುರಾಗಿದ್ದರಿಂದ ಸರಿಪಡಿಸಲು ತಿರುವನಂತಪುರದ ಏರ್ ಇಂಡಿಯಾ ಬೇಸ್ ಗೆ ರಾತ್ರಿಯೇ ವಿಮಾನವನ್ನು ಕಳುಹಿಸಿ ಕೊಡಲಾಗಿತ್ತು. ಇದರಿಂದ ನಿನ್ನೆ ರಾತ್ರಿಯಿಂದ ಆ ವಿಮಾನದಲ್ಲಿ ದುಬೈ ತೆರಳಬೇಕಿದ್ದ 180ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ವಿಮಾನ ಪ್ರಯಾಣ ತಡವಾಗಿದ್ದರಿಂದ ಪ್ರಯಾಣಿಕರು ರಾತ್ರಿ ಇಡೀ ವಿಮಾನ ನಿಲ್ದಾಣದಲ್ಲೇ ಕಳೆಯಬೇಕಾಯಿತು. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ಏರ್ಇಂಡಿಯಾ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರು.

ಐಎಕ್ಸ್ 814 ವಿಮಾನದ ದುರಸ್ತಿ ಸಾಧ್ಯವಾಗದ ಕಾರಣ ಏರ್ ಇಂಡಿಯಾ ಸಂಸ್ಥೆಯು ಬದಲಿ ವಿಮಾನವನ್ನು ವ್ಯವಸ್ಥೆ ಮಾಡಿತು. ಸೋಮವಾರ ಪ್ರಯಾಣಿಸಬೇಕಿದ್ದ 168 ಪ್ರಯಾಣಿಕರಲ್ಲಿ 161 ಮಂದಿ ಬದಲಿ ವಿಮಾನದಲ್ಲಿ ದುಬೈಗೆ ಮಂಗಳವಾರ ಮಧ್ಯಾಹ್ನ 12.10ಕ್ಕೆ ಪ್ರಯಾಣಬೆಳೆಸಿದರು. ಏಳು ಮಂದಿ ತಮ್ಮ ಪ್ರಯಾಣಕ್ಕೆ ಬೇರೆ ವ್ಯವಸ್ಥೆ ಮಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.