Home ಕರಾವಳಿ ವಿಮಾನದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕನಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿದ ಮಂಗಳೂರಿನ ವೈದ್ಯೆ ಡಾ. ಫಾತಿಮಾ

ವಿಮಾನದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕನಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿದ ಮಂಗಳೂರಿನ ವೈದ್ಯೆ ಡಾ. ಫಾತಿಮಾ

ಮಂಗಳೂರು: ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕರೊಬ್ಬರಿಗೆ ಮಂಗಳೂರಿನ ವೈದ್ಯೆಯೊಬ್ಬರು ಸಕಾಲದಲ್ಲಿ ಚಿಕಿತ್ಸೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಮಂಗಳೂರಿನ ಕುಲಶೇಖರದ ಡಾ. ತಾಜೀಶ್ ಫಾತಿಮಾ ಚಿಕಿತ್ಸೆ ನೀಡಿದ ವೈದ್ಯೆಯಾಗಿದ್ದಾರೆ.

ಮಂಗಳವಾರ ಸಂಜೆ 4:20ಕ್ಕೆ ದುಬೈಯಿಂದ ಹೊರಡಬೇಕಿದ್ದ ಸ್ಪೈಸ್ ಜೆಟ್ ವಿಮಾನವು ಕಾರಣಾಂತರದಿಂದ ರಾತ್ರಿ 7:20ಕ್ಕೆ ಹೊರಟಿತ್ತು. ಸುಮಾರು 8:30ರ ವೇಳೆಗೆ ಪ್ರಯಾಣಿಕರೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದರು. ಆ ವೇಳೆ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಡಾ. ತಾಜೀಶ್ ತಕ್ಷಣ ಪ್ರಯಾಣಿಕನ ನೆರವಿಗೆ ಧಾವಿಸಿದರಲ್ಲದೆ  ಸಹ ಪ್ರಯಾಣಿಕರ ಸಹಾಯದಿಂದ ಚಿಕಿತ್ಸೆ ನೀಡಿದರು. ಕೆಲವೇ ನಿಮಿಷದಲ್ಲಿ ಪ್ರಯಾಣಿಕ ಚೇತರಿಸಿಕೊಂಡರು ಎನ್ನಲಾಗಿದೆ.

ಅವರ ಈ ಸೇವೆ, ಸಮಯ ಪ್ರಜ್ಞೆಗೆ  ಮೆಚ್ಚುಗೆ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿವೆ.

ಈ ಕುರಿತು ಪ್ರತಿಕ್ರಿಯಿಸಿದ ಡಾ. ತಾಜೀಶ್ ,  ಮಂಗಳವಾರ  ರಾತ್ರಿ ನಾನು ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈಯಿಂದ ಮಂಗಳೂರಿಗೆ ಬರುವಾಗ ಹಿಂದಿ ಮಾತನಾಡುವ ಸುಮಾರು 40 ವರ್ಷ ಪ್ರಾಯದ ಪ್ರಯಾಣಿಕರೊಬ್ಬರು ಅಸ್ವಸ್ಥಗೊಂಡ ಬಗ್ಗೆ ಪೈಲಟ್’ನಿಂದ ಮಾಹಿತಿ ಸಿಕ್ಕಿತು. ತಕ್ಷಣ ನಾನು ಧಾವಿಸಿ ಚಿಕಿತ್ಸೆ ನೀಡಿದೆ. ಪ್ರಯಾಣಿಕನೊಬ್ಬನ ಪ್ರಾಣ ಉಳಿಸಿದ ಖುಷಿಯೊಂದಿಗೆ ನನ್ನ ಕರ್ತವ್ಯ ನಿಭಾಯಿಸಿದ ತೃಪ್ತಿ ನನಗೆ ಇದೆ ಎಂದಿದ್ದಾರೆ.

Join Whatsapp
Exit mobile version