►ಈ ಬಾರಿ ಹಾಫ್ ಮ್ಯಾರಥಾನ್ ವಿಶೇಷ
ಮಂಗಳೂರು: ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವ ಅಕ್ಟೋಬರ್ 3ರಿಂದ 14ರ ವರೆಗೆ ನಡೆಯಲಿದ್ದು, ದಸರಾ ವಿಶೇಷವಾಗಿ ಅ.6ರಂದು ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಕುದ್ರೋಳಿ ಕ್ಷೇತ್ರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 1991ರಿಂದ ಆರಂಭಗೊಂಡ ‘ಮಂಗಳೂರು ದಸರಾ ವೈಭವವು ಕುದ್ರೋಳಿಯ ಗೋಕರ್ಣನಾಥನ ಕೃಪೆಯೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. ಇದನ್ನು ಈ ಹಂತಕ್ಕೆ ಬೆಳೆಸಿದವರು ಜನರು ಎಂದರು.
ಮಂಗಳೂರು ದಸರಾ ವೈಭವದ ಬಗ್ಗೆ ಮಾಹಿತಿ ನೀಡಿದ ದೇವಸ್ಥಾನ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್., ಅ. 3ರಂದು ಬೆಳಗ್ಗೆ 8.30ಕ್ಕೆ ಗುರು ಪ್ರಾರ್ಥನೆಯೊಂದಿಗೆ ಮಂಗಳೂರು ದಸರಾ ಆರಂಭಗೊಂಡು ಅ. 14ರಂದು ಬೆಳಗ್ಗೆ 8ಕ್ಕೆ ಗುರುಪೂಜೆಯೊಂದಿಗೆ ಸಮಾಪನಗೊಳ್ಳಲಿದೆ ಎಂದರು.
ದಸರಾ ಪ್ರಯುಕ್ತ ಕಳೆದ ವರ್ಷ ವಾಕಥಾನ್ ನಡೆಸಲಾಗಿದ್ದು, ಈ ಬಾರಿ ಅ. 6ರಂದು ಬೆಳಗ್ಗೆ 5.30ಕ್ಕೆ ಕ್ಷೇತ್ರದಿಂದ 21 ಕಿ.ಮೀ.ಗಳ ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಮ್ಯಾರಥಾನ್ನಲ್ಲಿ ಸುಮಾರು 2000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪದ್ಮರಾಜ್ ವಿವರಿಸಿದರು.
ತುಳುನಾಡಿನ ಸಂಸ್ಕೃತಿಗೆ ಚ್ಯುತಿ ಬಾರದ ರೀತಿಯಲ್ಲಿ ಮೆರವಣಿಗೆಯಲ್ಲಿ ಟ್ಯಾಬ್ಲೋಗಳನ್ನು ಅಳವಡಿಸುವಂತೆ ಈಗಾಗಲೇ ಕ್ಷೇತ್ರದ ವತಿಯಿಂದ ಸಭೆ ಕರೆದು ಟ್ಯಾಬ್ಲೋಗಳನ್ನು ರಚಿಸುವವರಿಗೆ ಸೂಚನೆ ನೀಡಲಾಗಿದೆ. ಡಿಜೆ ಹಾಗೂ ಇತರ ಧ್ವನಿವರ್ಧಕಗಳ ಕುರಿತಂತೆ ಈಗಾಗಲೇ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಕ್ಷೇತ್ರದ ವತಿಯಿಂದ ಈ ಬಗ್ಗೆ ಜವಾಬ್ಧಾರಿಯನ್ನು ನಿರ್ವಹಿಸಲಾಗುತ್ತಿದ್ದು, ಪೊಲೀಸ್ ಇಲಾಖೆಯ ಸಹಕಾರವನ್ನು ಕೋರಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸುರಕ್ಷಾ ಕ್ರಮಗಳ ಬಗ್ಗೆಯೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಗಮನ ಸೆಳೆದಿದೆ. ಆಡಳಿ ಸಮಿತಿಯೂ ಭಕ್ತರ ಸುರಕ್ಷತೆಯ ದೃಷ್ಟಿಯಲ್ಲಿ ಪೂರಕ ವಾತಾವರಣ ಕಲ್ಪಿಸುತ್ತಿದೆ ಎಂದು ಪದ್ಮರಾಜ್ ತಿಳಿಸಿದರು.