ಮಂಗಳೂರು: ನಾಗುರಿಯಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಿದ್ದಾರೆ.
ನವೆಂಬರ್ 19ರಂದು ಶಂಕಿತ ಉಗ್ರ ಶಾರೀಕ್ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಕೊಂಡೊಯ್ಯುತ್ತಿದ್ದಾಗ ಸ್ಫೋಟಗೊಂಡಿತ್ತು. ಪ್ರಕರಣ ನಡೆದ ಮರುದಿನದಿಂದಲೇ ಎನ್’ಐಎ ಅಧಿಕಾರಿಗಳು ಪೊಲೀಸರ ಜೊತೆಗೆ ವಿಚಾರಣೆ ನಡೆಸುತ್ತಿದ್ದರು. ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳಿಗೆ ಪ್ರಕರಣದ ವಿಚಾರಣೆಯನ್ನು ನಗರ ಪೊಲೀಸ್ ಆಯುಕ್ತರು ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ.
ಸ್ಫೋಟದಿಂದ ಆರೋಪಿಗೆ ಸುಟ್ಟಗಾಯಗಳಾಗಿದ್ದವು. ನಗರದ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿಯ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ. ಆತನನ್ನು ವಿಚಾರಣೆಗೆ ಒಳಪಡಿಸಲು ವೈದ್ಯರ ತಂಡ ತನಿಖಾಧಿಕಾರಿಗಳಿಗೆ ಅನುಮತಿ ನೀಡಿದ್ದು, ನಿನ್ನೆ ಅಧಿಕಾರಿಗಳು ಸ್ವಲ್ಪ ಹೊತ್ತು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.