Home ಟಾಪ್ ಸುದ್ದಿಗಳು ಮಂಗಳೂರು ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಸಹಿತ ಇಬ್ಬರ ಬಂಧನ

ಮಂಗಳೂರು ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಸಹಿತ ಇಬ್ಬರ ಬಂಧನ

►15 ದಿನಗಳ ಹಿಂದೆ ಬಿಡುಗಡೆಯಾಗಿ ಮತ್ತೆ ದಂಧೆ ಆರಂಭ!

ಮಂಗಳೂರು: “ಡ್ರಗ್ಸ್ ಫ್ರೀ ಮಂಗಳೂರು” ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮುಂದುವರಿಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರದಾದ್ಯಂತ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ MDMA ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

ನಗರದ ಕೆ.ಎಸ್. ರಾವ್ ರಸ್ತೆ ಪರಿಸರದಲ್ಲಿ ಅಕ್ರಮವಾಗಿ MDMA ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ, ಉಪ್ಪಿನಂಗಡಿಯ ಪಡ್ಡ ಸೂರ್ಯ ಮನೆ ನಿವಾಸಿ ಪಿ.ಎಸ್. ಅಬ್ದುಲ್ ಅಜೀಜ್ (31) ಮತ್ತು ಸುರತ್ಕಲ್ ಕಾಟಿಪಳ್ಳ ನಿವಾಸಿ ಅಕ್ಷಿತ್ ಕುಮಾರ್(26) ಎಂಬ ಇಬ್ಬರನ್ನು ಬಂಧಿಸಿದ್ದಾರೆ.

ಒಟ್ಟು 35 ಗ್ರಾಂ ತೂಕದ ರೂ. 1,75,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, 2 ಮೊಬೈಲ್ ಫೋನ್ ಗಳು, 600ರೂ. ನಗದು, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 1,96,000 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.

ಆರೋಪಿಗಳ ಪೈಕಿ ಅಬ್ದುಲ್ ಅಜೀಜ್ ವಿರುದ್ಧ ಈ ಹಿಂದೆ ಉಪ್ಪಿನಂಗಡಿ, ವಿಟ್ಲ ಹಾಗೂ ಉರ್ವ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದ ಮೂರು ಪ್ರಕರಣ ದಾಖಲಾಗಿವೆ. 15 ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡಿದ್ದ ಈತ ಮತ್ತೆ ಅದೇ ಮಾದಕ ವಸ್ತು ಮಾರಾಟ ದಂಧೆಗೆ ಇಳಿದಿದ್ದ.

ಜಾಲದ ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬಂದಿ ಕೈಗೊಂಡಿದ್ದಾರೆ.

Join Whatsapp
Exit mobile version