Home ಕರಾವಳಿ ಮಂಗಳೂರು: ಬಿಲ್ಲವ ಸಮಾಜದ ವತಿಯಿಂದ ಮಂಗಳೂರಿನಿಂದ ಬೆಂಗಳೂರಿಗೆ  ಪಾದಯಾತ್ರೆ

ಮಂಗಳೂರು: ಬಿಲ್ಲವ ಸಮಾಜದ ವತಿಯಿಂದ ಮಂಗಳೂರಿನಿಂದ ಬೆಂಗಳೂರಿಗೆ  ಪಾದಯಾತ್ರೆ

ಮಂಗಳೂರು:  ಬಿರುವ ಈಡಿಗ ನಾಮಧಾರಿ ಇತ್ಯಾದಿ ಸಮಸ್ತ ಜನಾಂಗದ ಏಳಿಗೆಗಾಗಿ 675 ಕಿಲೋಮೀಟರ್‌ಗಳ ಪಾದಯಾತ್ರೆ ಮಾಡುವುದಾಗಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 6ನೇ ತಾರೀಕಿನಿಂದ ಉಡುಪಿ, ಶಿವಮೊಗ್ಗ, ತುಮಕೂರು ದಾರಿಯಾಗಿ ಬೆಂಗಳೂರಿಗೆ ಪಾದಯಾತ್ರೆ ಮಾಡಿ, ಅನಂತರ ಬೇಡಿಕೆ ಈಡೇರುವವರೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು.

ಸಿಗಂದೂರು ಆಲಯ ನಮ್ಮ ಜನರು ನಡೆಸುವ ಆಲಯ. ಅದನ್ನು ಮೇಲ್ಜಾತಿಯ ಕೈಗೆ ನೀಡಲು ಹೊರಟಿರುವುದು ಖಂಡನೀಯ. ಏಳು ಶಾಸಕರು, ಇಬ್ಬರು ಮಂತ್ರಿಗಳು ಬಾಯಿ ಬಿಡದ ಮೂಕರು. ಎಲ್ಲ ಪಕ್ಷಗಳೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕ್ಷೇತ್ರಗಳಲ್ಲಿ ಎಂಎಲ್‌ಎ ಟಿಕೆಟ್ ನೀಡಬೇಕು. ತೆಲಂಗಾಣ, ಆಂಧ್ರಗಳಲ್ಲಿ ನಮ್ಮ ಜನಾಂಗದವರ ನಿಗಮಗಳು ಇವೆ. ಕರ್ನಾಟಕದಲ್ಲೂ‌ ನಮ್ಮ ಸಮುದಾಯದ ಅಭಿವೃದ್ಧಿ ನಿಗಮ ಆಗಬೇಕು ಮತ್ತು 500 ಕೋಟಿ ಅನುದಾನ ನೀಡಬೇಕು ಎಂದ ಪ್ರಣವಾನಂದರು ಸರಕಾರದ ನಾಟಕವಾದ ಕೋಶ ನೀಡುವ ಪತ್ರವನ್ನು ಹರಿದು ಹಾಕಿದರು.

ನಮ್ಮದು ನಾರಾಯಣ ಗುರು ನಿಗಮ. ನಮ್ಮ ಹಕ್ಕು ಕೊಡಿ. ನಮ್ಮ ಜನಪ್ರತಿನಿಧಿಗಳ ಮೌನ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಯ ವಂಚನೆ ಸಲ್ಲದು. ವಂಚನೆ ನಿಲ್ಲದಿದ್ದರೆ ಚುನಾವಣೆಯಲ್ಲಿ ಅವರಿಗೆ ನಮ್ಮ ಸಮುದಾಯದವರು ಬುದ್ಧಿ ಕಲಿಸುವರು. ಎಲ್ಲ ಪಕ್ಷದವರ ಬೆಂಬಲ ಕೋರಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇನೆ ಎಂದು ಅವರು ಹೇಳಿದರು.

ಸರಕಾರದ ಕಡೆಯವರಿಂದ ಬೆದರಿಕೆ ಇದೆ, ಆಮಿಷ ಇದೆ. ಅದಕ್ಕೆಲ್ಲ ಈ ಪ್ರಣವಾನಂದ ಸ್ವಾಮೀಜಿ ಬಾಗುವುದಿಲ್ಲ. ಬಿಲ್ಲವ ಸಮುದಾಯವನ್ನು ಬಲಪಡಿಸುವುದಷ್ಟೆ ನಮ್ಮ ಉದ್ದೇಶ. ಪಾದಯಾತ್ರೆಯ ಉದ್ಘಾಟನೆ ಜನಾರ್ದನ ಪೂಜಾರಿ ನಡೆಸುವರು ಎಂದು ಸ್ವಾಮೀಜಿ  ಹೇಳಿದರು.

ಮೊದಲು ನಡೆದ ಸಭೆಯಲ್ಲಿ ಜಿತೇಂದ್ರ ಸುವರ್ಣರ ನೇತೃತ್ವದಲ್ಲಿ ಪಾದಯಾತ್ರೆ ಸಮಿತಿ ರಚಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸುನಿತಾ, ಪಾರ್ವತಿ, ರಂಜನ್ ಮಿಜಾರ್, ಗಣೇಶ ಮೊದಲಾದವರು ಉಪಸ್ಥಿತರಿದ್ದರು.

Join Whatsapp
Exit mobile version