Home ಟಾಪ್ ಸುದ್ದಿಗಳು ಬಸ್ ಸಂಚಾರ ವ್ಯತ್ಯಯ: ಮಂಗಳೂರು–ಬೆಂಗಳೂರು ನಡುವೆ ಹೆಚ್ಚುವರಿ ರೈಲು

ಬಸ್ ಸಂಚಾರ ವ್ಯತ್ಯಯ: ಮಂಗಳೂರು–ಬೆಂಗಳೂರು ನಡುವೆ ಹೆಚ್ಚುವರಿ ರೈಲು

►ಸಂಸದ ಬ್ರಿಜೇಶ್ ಚೌಟ ಮನವಿಗೆ ಸ್ಪಂದಿಸಿದ ರೈಲ್ವೆ ಅಧಿಕಾರಿಗಳು

ಮಂಗಳೂರು: ಗುಡ್ಡ ಕುಸಿತದಿಂದಾಗಿ ಕರಾವಳಿಯನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುವ ಎರಡು ಮುಖ್ಯ ರಾಷ್ಟೀಯ ಹೆದ್ದಾರಿಗಳಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಆಗಿರುವ ಹಿನ್ನೆಲೆಯಲ್ಲಿ ಎರಡು ಹೆಚ್ಚುವರಿ ವಿಶೇಷ ರೈಲು ಸಂಚಾರ ಆರಂಭಿಸಲು ನೈರುತ್ಯ ರೈಲ್ವೆ ಕ್ರಮ ಕೈಗೊಂಡಿದೆ.


06547 ಸಂಖ್ಯೆಯ ರೈಲು ಯಶವಂತಪುರದಿಂದ ಇಂದು (ಶುಕ್ರವಾರ) ಹೊರಡಲಿದ್ದು, 06548 ಸಂಖ್ಯೆಯ ರೈಲು ಮಂಗಳೂರು ಜಂಕ್ಷನ್ನಿಂದ ಶನಿವಾರ ಹೊರಡಲಿದೆ. 06549 ಸಂಖ್ಯೆಯ ರೈಲು ಇದೇ 21 ಮತ್ತು 22ರಂದು ಯಶವಂತಪುರರಿಂದ ಮಂಗಳೂರು ಜಂಕ್ಷನ್ ಗೆ ಹೊರಡಲಿದ್ದು, 06550 ಸಂಖ್ಯೆಯ ರೈಲು 21 ಮತ್ತು 22ರಂದು ಮಂಗಳೂರು ಜಂಕ್ಷನ್ ನಿಂದ ಯಶವಂತಪುರಕ್ಕೆ ಹೊರಡಲಿದೆ.


ತಲಾ ಎರಡು ಸ್ಲೀಪರ್ ಕೋಚ್ ಗಳು ಸೇರಿದಂತೆ ಈ ಎಲ್ಲ ರೈಲುಗಳಲ್ಲಿ ಒಟ್ಟು 18 ಕೋಚ್ ಗಳು ಇರುತ್ತವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ರೈಲು ಸಂಖ್ಯೆ 06547 ಬೆಂಗಳೂರು ನಗರ ಜಂಕ್ಷನ್ (ಎಸ್ಬಿಸಿ)ನಿಂದ ರಾತ್ರಿ 11 ಗಂಟೆಗೆ ಹೊರಟು ಮರುದಿನ ಮಧ್ಯಾಹ್ನ 11:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ರೈಲು ಸಂಖ್ಯೆ 06548 ಮಂಗಳೂರು ಜಂಕ್ಷನ್ ನಿಂದ ಮಧ್ಯಾಹ್ನ 1:40ಕ್ಕೆ ಹೊರಟು ರಾತ್ರಿ 11:15ಕ್ಕೆ ಯಶವಂತಪುರ ತಲುಪಲಿದೆ.


ರೈಲು ಸಂಖ್ಯೆ 06549 ಯಶವಂತಪುರದಿಂದ ರಾತ್ರಿ 12.30ಕ್ಕೆ ಹೊರಟು ಮರುದಿನ ಮಧ್ಯಾಹ್ನ 11:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ರೈಲು ಸಂಖ್ಯೆ 06550 ಮಂಗಳೂರು ಜಂಕ್ಷನ್ ನಿಂದ 1:40ಕ್ಕೆಹೊರಟು ಯಶವಂತಪುರಕ್ಕೆ ರಾತ್ರಿ 11:15ಕ್ಕೆ ತಲುಪಲಿದೆ ಎಂದು ರೈಲ್ವೆ ಇಲಾಖೆ ಪ್ರಕಟನೆ ತಿಳಿಸಿದೆ.


ಮಂಗಳೂರು-ಬೆಂಗಳೂರು ನಡುವೆ ತುರ್ತಾಗಿ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮತ್ತು ಮೈಸೂರು ವಿಭಾಗದ ವ್ಯವಸ್ಥಾಪಕರಿಗೆ ಶುಕ್ರವಾರ ಬೆಳಿಗ್ಗೆ ಪತ್ರ ಬರೆದಿದ್ದರು.


ಮಂಗಳೂರು- ಬೆಂಗಳೂರು ನಗರಗಳ ನಡುವೆ ಪ್ರತಿನಿತ್ಯ ಹೆಚ್ಚು ಜನರು ಪ್ರಯಾಣಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಇತರ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ಹೆಚ್ಚುವರಿ ರೈಲು ಸೇವೆಯನ್ನು ಒದಗಿಸುವ ಅಗತ್ಯವಿದೆ. ಶೀಘ್ರದಲ್ಲಿ ಹೆಚ್ಚುವರಿ ರೈಲು ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಚೌಟ ವಿನಂತಿಸಿದ್ದಾರೆ.

Join Whatsapp
Exit mobile version